ತಾಳಿಕೋಟಿ

ಕಲಾವಿದರು ಮರಣಾನಂತರವೂ ಜೀವಂತವಿರುತ್ತಾರೆ: ಸಿದ್ಧಲಿಂಗದೇವರು

ಕಲಾವಿದರು ಮರಣಾನಂತರವೂ ಜೀವಂತವಿರುತ್ತಾರೆ: ಸಿದ್ಧಲಿಂಗದೇವರು
ತಾಳಿಕೋಟೆ ನೀಲಕಂಠೇಶ್ವರ ಸಭಾಭವನದಲ್ಲಿ ``ಕಲ್ಯಾಣದ ಅಂಗಳದಲಿ'' ಎಂಬ ಧ್ವನಿ ಮುದ್ರಿಕೆಯ ಬಿಡುಗಡೆ ಮಾಡಲಾಯಿತು.

ತಾಳಿಕೋಟೆ05: ಸತ್ತಮೇಲೂ ಜೀವಂತವಾಗಿ ಉಳಿಯುವವರು ಕಲಾವಿದರು ಮಾತ್ರ. ಜೀವವಿಲ್ಲದ ಸಂಗೀತ ಪರಿಕರಗಳಿಗೆ ನಾದ, ನಿನಾದ, ಸುನಾದ ತುಂಬಿ ತೀಡಿ, ಸಂಗೀತದಂತೆ ಅಮರರಾಗುತ್ತಾರೆ ಅಂಥ ಅಪರೂಪದ ಸಂಗೀತ ಶಿಕ್ಷಕರು ವಠಾರ ಗುರುಗಳು ಎಂದು ಖಾಸ್ಗತೇಶ್ವರಮಠದ ಸಿದ್ಧಲಿಂಗದೇವರು ಹೇಳಿದರು.

ಅವರು ಪಟ್ಟಣದ ನೀಲಕಂಠೇಶ್ವರ ಸಭಾಭವನದಲ್ಲಿ ಎ.ಎಸ್.ವಠಾರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಸುಗಮ ಸಂಗೀತ,  ಕರೋಕೆ ಭಕ್ತಿಗೀತೆಗಳ ಕಾರ್ಯಕ್ರಮ ಹಾಗೂ ``ಕಲ್ಯಾಣದ ಅಂಗಳದಲಿ'' ಎಂಬ ಧ್ವನಿ ಮುದ್ರಿಕೆಯ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಹಾನಗಲ್ಲ ಕುಮಾರಸ್ವಾಮಿಗಳು ಅಂದು ಮಾಡಿದ ಸಂಗೀತ ಶಾಲೆಯ ಕಾರಣ ಇಂದು ಸಾವಿರಾರು ಗಾನಕೋಗಿಲೆಗಳು ಹಾಡುತ್ತಿವೆ. ಸಂಗೀತಕ್ಕೆ ಪುಟ್ಟರಾಜ ಗವಾಯಿಗಳ ಸೇವೆಯಂತೆ ಕಣ್ಣಿಲ್ಲದಿದ್ರೂ ಸಹಿತ ವಠಾರ ಗುರುಗಳು ಎಲ್ಲರಿಗು ಸಂಗೀತವನ್ನು ಕಲಿಸಿ ಅಪರೂಪದಲ್ಲಿ ಅಪರೂಪರಾದರು ಎಂದರು.

ಬಸವನ ಬಾಗೇವಾಡಿಯ ಬಾಲಿಕೆಯರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ, ಸಾಹಿತಿ ಅಶೋಕ ಹಂಚಲಿ, ಅಧ್ಯಕ್ಷತೆಯನ್ನು ವಹಿಸಿದ್ದ ಬಿ.ಕೆ.ಸಲಗರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರಮೇಶ ಯರಿಕ್ಯಾಳ  ಮಾತನಾಡಿದರು. ಅತಿಥಿಗಳಾಗಿ ಪುರಸಭೆ ಸದಸ್ಯ ವಾಸುದೇವ ಹೆಬಸೂರ, ಸಾಯಿರಾಬಾನು ವಠಾರ,  ಚಿದಂಬರ ಕರಮಳಕರ(ಭಕ್ಷಿ), ಮಲ್ಲಿಕಾರ್ಜುನ ಹಿಪ್ಪರಗಿ ಇದ್ದರು.

ತಾಳಿಕೋಟೆಯ ಹಿರಿಯ ಸಂಗೀತ ಶಿಕ್ಷಕ ಲಕ್ಷ್ಮಣಸಿಂಗ ಬಿಜಾಪುರ ಹಾಗೂ ಮಡಿಕೇಶ್ವರದ ಹಿರಿಯ ತಬಲಾವಾದಕ ಮಹಾದೇವಪ್ಪ ಮಡಿಕೇಶ್ವರ ಅವರುಗಳನ್ನು ಗೌರವಿಸಲಾಯಿತು.

ಆಕಾಶವಾಣಿ ಕಲಾವಿದ ಬಸವರಾಜ ಭಂಟನೂರ ಪ್ರಾಸ್ತಾವಿಕವಾಗಿ ಮಾತನಾಡಿ ಸಂಗೀತ ನುಡಿನಮನ ಸಲ್ಲಿಸಿದರು. ಸಂಗೀತ ಕಾರ್ಯಕ್ರಮದಲ್ಲಿ ಯಮನೇಶ ಯಾಳಗಿ, ಗುಂಡಣ್ಣ ಹಂದಿಗನೂರ, ಬೀದರನ ಜನಾರ್ಧನ ವಾಗ್ಮೋರೆ, ದತ್ತು ಕೀರ್ತಿಕರ, ಜ್ಞಾನದೇವ ದುಮಾಳೆ, ಸ್ಥಳೀಯ ಸಂಗೀತ ಶಾಲೆಯ ಮಕ್ಕಳು, ಸಂಗೀತ ಶಾಲೆಯ ಗೋವಿಂದಸಿಂಗ ಹಜೇರಿ, ದೀಪಕಸಿಂಗ ಹಜೇರಿ, ಮಲ್ಲಿಕಾರ್ಜುನ ನಾವಿ, ಕಾವೇರಿ ಹೂಗಾರ, ಯಲ್ಲಪ್ಪ ಗುಂಡಳ್ಳಿ, ರಾಜು ಗುಬ್ಬೇವಾಡ, ವೀರೇಶ ಬಳಗಾರ, ಮಂಜುನಾಥ ಶಿರೋಡ ಸಂಗೀತ ನೀಡಿದರು. ಶ್ರೀನಿವಾಸ ಬಸವಂತಪುರ  ಭವಾನಿ ಕುಲಕರ್ಣಿ ನಿರ್ವಹಿಸಿದರು ಶ್ವೇತಾ ಹಂದಿಗನೂರ ಸಂಗಡಿಗರು ಪ್ರಾರ್ಥಿಸಿದರು.


ಸುದ್ದಿ ಓದಿ