ಶ್ರಾವಣ ಪುರಾಣ ಪ್ರವಚನ ಮಂಗಲೋತ್ಸವ ಸಂಪನ್ನ
ಲೋಕದರ್ಶನ ವರದಿ
ಸವದತ್ತಿ 10: ನಗರದ ಮಾಮನಿ ಕಲ್ಯಾಣ ಮಂಟಪದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ನಡೆದ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ ಪುರಾಣ ಪ್ರವಚನ ಮಹೋತ್ಸವವು ಭಕ್ತಿ-ಶ್ರದ್ಧೆಯಿಂದ ಮಂಗಲಗೊಂಡಿತು.
ಶ್ರೀ ಜಗದ್ಗುರು ಸಿದ್ಧಾರೂಢ ಮಠ, ನೇಗಿನಹಾಳದ ಪುರಾಣ ಪ್ರವಚನಕಾರರಾದ ಶ್ರೀ ಅದ್ವೈತಾನಂದ ಭಾರತಿ ಮಹಾಸ್ವಾಮಿಗಳು ಒಂದು ತಿಂಗಳ ಕಾಲ ನೀಡಿದ ಪ್ರವಚನದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳ ತತ್ವ, ಸಂದೇಶ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ಭಕ್ತರಿಗೆ ತಿಳಿಸಿಕೊಟ್ಟರು. ಅವರ ಅಮೃತವಾಣಿಯು ಭಕ್ತರಲ್ಲಿ ಭಕ್ತಿ, ಜ್ಞಾನ, ವೈರಾಗ್ಯ ಹಾಗೂ ಸನ್ಮಾರ್ಗದ ಚಿಂತನೆಯನ್ನು ಮೂಡಿಸಿತು.
ಮಂಗಲೋತ್ಸವದಲ್ಲಿ ಮಾತನಾಡಿದ ವಿರೂಪಾಕ್ಷ ಮಾಮನಿ, ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸತ್ಚಿಂತನೆ ಹಾಗೂ ನೆಮ್ಮದಿಯನ್ನು ಮೂಡಿಸುತ್ತವೆ ಎಂದರು. ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿ ಹಾಗೂ ಸೌಹಾರ್ದತೆ ದೊರೆಯಲಿ ಎಂದು ಶ್ರೀ ಸಿದ್ಧಾರೂಢ ಸ್ವಾಮಿಗಳಲ್ಲಿ ಪ್ರಾರ್ಥಿಸಲಾಯಿತು.
ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಪೂರ್ಣಾನಂದ ಭಾರತಿ ಮಹಾಸ್ವಾಮಿಗಳು, ್ಞ್ತ ಶ್ರೀ ಮುಕ್ತಾನಂದ ಮಹಾಸ್ವಾಮಿಗಳು, ಬ್ರಹ್ಮಾನಂದಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಹಾಗೂ ಚಿದಂಬರೇಶ್ವರ ದೇವಸ್ಥಾನದ ಶ್ರೀ ಪ್ರಸನ್ನ ದೀಕ್ಷಿತರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ರತ್ನಾ ಮಾಮನಿ, ರಾಮದುರ್ಗ ಡಿವೈಎಸ್ಪಿ, ಚಿದಂಬರ ಮಡಿವಾಳರ, ಬಸವರಾಜ ಕಾರದಗಿ, ಜಗದೀಶ ಶಿಂತ್ರಿ, ಬಿ.ವಿ. ಮಲ್ಲಗೌಡ್ರ, ದೊಡ್ಡಗೌಡ ಪಾಟೀಲ, ಸಿದ್ದಪ್ಪ ಗೊರವನಕೊಳ್ಳ, ಲಕ್ಷ್ಮಣ ಹೆಬ್ಬಳ್ಳಿ ಸೇರಿದಂತೆ ಗಣ್ಯರು, ಮುಖಂಡರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.