ರಾಜಸ್ಥಾನದ ಕೋಟಾದಲ್ಲಿ ಕಂದಕಕ್ಕೆ ಉರುಳಿದ ಟೆಂಪೋ ಟ್ರಾವೆಲರ್: ಐವರು ಮಹಿಳೆಯರು ಸೇರಿ 8 ಮಂದಿ ಸಾವು, 17 ಮಂದಿಗೆ ಗಾಯ
ಜೈಪುರ, ಅ. 17 : ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಮುಂಬೈ-ದೆಹಲಿ ಎಕ್ಸ್ಪ್ರೆಸ್ವೇಯ ಸೇತುವೆಯ ಮೇಲಿನಿಂದ ಟೆಂಪೋ ಟ್ರಾವೆಲರ್ವೊಂದು ಜಾರಿ 15 ಅಡಿ ಆಳದ ಕೆಸರು ತುಂಬಿದ ಕಂದಕಕ್ಕೆ ಬಿದ್ದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಕನಿಷ್ಠ ಎಂಟು ಯಾತ್ರಿಕರು ಮೃತಪಟ್ಟಿದ್ದು, ಸುಮಾರು 17 ಮಂದಿ ಗಾಯಗೊಂಡಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ನಿಂದ ಸಿಕಾರ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಖಾಟು ಶ್ಯಾಮ್ ಜಿ ಧಾಮ್ಗೆ ದರ್ಶನ ಪಡೆಯಲು ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ವಾಹನವು ಶನಿವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ಸಮಲಿಯಾ ಕರ್ದಿಯಾ ಗ್ರಾಮದ ಸಮೀಪ ಅಪಘಾತಕ್ಕೀಡಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಾಲಕ ನಿದ್ರೆಗೆ ಜಾರಿದ್ದರಿಂದ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ವೇಳೆ ವಾಹನವು ಎಂಟು ಪಥಗಳ ಎಕ್ಸ್ಪ್ರೆಸ್ವೇಯ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದೆ.
ಕಂದಕದಲ್ಲಿ ಬಿದ್ದ ವಾಹನದೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಸಾಕಷ್ಟು ಶ್ರಮ ವಹಿಸಿದರು. ಹೆಚ್ಚಿನವರು ಸ್ಥಳದಲ್ಲೇ ಮೃತಪಟ್ಟಿದ್ದು, ಕೆಲವರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಗಾಯಗಳಿಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ.
ಗಾಯಾಳುಗಳನ್ನು ಕೋಟಾದ ಎಂ.ಬಿ.ಎಸ್. ಆಸ್ಪತ್ರೆ ಮತ್ತು ನ್ಯೂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಎಲ್ಲರ ಸ್ಥಿತಿ ಅಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳಲ್ಲಿ ಹೆಚ್ಚಿನವರು ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ.
ಮೃತರನ್ನು ರಾಜು, ಸೂರ್ಯವಂಶಿ, ಓಂ, ಅರುಣಾ, ವೈಷ್ಣವಿ, ತ್ರಿಷಾ, ಕೃಷ್ಣ ಮತ್ತು ಅನಿತಾ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೋಕಸಭಾ ಸ್ಪೀಕರ್ ಹಾಗೂ ಸ್ಥಳೀಯ ಸಂಸದ ಓಂ ಬಿರ್ಲಾ, ಜಿಲ್ಲಾಧಿಕಾರಿ ಪೀಯೂಷ್ ಸಾಮರಿಯಾ ಮತ್ತು ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ಪರಿಶೀಲನೆ ನಡೆಸಿದರು.
ಈ ದುರಂತದಲ್ಲಿ ಯಾತ್ರಿಕರು ಮೃತಪಟ್ಟಿರುವುದಕ್ಕೆ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಮತ್ತು ಅವರ ಪೂರ್ವಾಧಿಕಾರಿ ಅಶೋಕ್ ಗೆಹ್ಲೋಟ್ ತೀವ್ರ ಆಘಾತ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಅವರು ಸಾಂತ್ವನ ತಿಳಿಸಿದ್ದಾರೆ.
ಗಾಯಾಳುಗಳಿಗೆ ತ್ವರಿತವಾಗಿ ಮತ್ತು ಸೂಕ್ತ ಚಿಕಿತ್ಸೆ ಒದಗಿಸುವಂತೆ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.