ತಾಳಿಕೋಟಿ

ಸರಳ ಸಾಂಪ್ರದಾಯಿಕವಾಗಿ ಶರಣಮುತ್ಯಾರವರ ರಥೋತ್ಸವ

ಸರಳ ಸಾಂಪ್ರದಾಯಿಕವಾಗಿ ಶರಣಮುತ್ಯಾರವರ ರಥೋತ್ಸವ

ತಾಳಿಕೋಟೆ 01: ಪಟ್ಟಣದ ಆರಾಧ್ಯ ದೈವ ಸಾಂಭಪ್ರಭು ಶರಣಮುತ್ಯಾರವರ ಜಾತ್ರಾ ಮಹೋತ್ಸವವು ಕೊರೊನಾ ಎರಡನೆ ಅಲೆ ಹಿನ್ನಲೆಯಲ್ಲಿ ಗುರವಾರ ಸರಳವಾಗಿ ಜರುಗಿತು.

ಕೊರೊನಾ ಮಾಹಾಮಾರಿ ಹಿನ್ನಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ ರದ್ದುಗೊಳಿಸಿದ ಹಿನ್ನಲೆಯಲ್ಲಿ ಸರಳವಾಗಿ ರಥೋತ್ಸವ ಸಾಂಪ್ರದಾಯಿಕವಾಗಿ ನಡೆಸಲಾಯಿತು. ಸಂಜೆ 6 ಗಂಟೆಗೆ ಎಳೆಯಬೇಕಾದ ರಥವನ್ನು ಮಧ್ಯಾಹ್ನ 4 ಗಂಟೆಗೆ ಎಳೆಯುವ ಮೂಲಕ ಸಂಪ್ರದಾಯವನ್ನು ಪಾಲಿಸಲಾಯಿತು. ಪ್ರತಿ ವರ್ಷ ಸಂಜೆ 6 ಗಂಟೆಗೆ ರಥವನ್ನು ಎಳೆಯಲಾಗುತ್ತಿತ್ತು. ಸಂಜೆ ಎಳೆದರೆ ಸಂಪ್ರದಾಯದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನಲೆಯಲ್ಲಿ 4 ಗಂಟೆಗೆ ಸಾಂಪ್ರದಾಯಿಕವಾಗಿ ರಥವನ್ನು ಪೊಲೀಸ್‍ರ ಸಮ್ಮುಖದಲ್ಲಿ ಕೆಲವೆ ಭಕ್ತರ ಮಧ್ಯೆ ಎಳೆಯಲಾಯಿತು.

ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೂಲಕ ದೇವಸ್ಥಾನವನ್ನು ತಲುಪಿತು. ಪಲ್ಲಕ್ಕಿ ಉತ್ಸವದಲ್ಲಿ ಪುರುವಂತರ ಸೇವೆ, ಭಜನೆ, ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದರು. ಪಲ್ಲಕ್ಕಿ ಉತ್ಸವವು ದೇವಸ್ಥಾನ ತಲುಪುತ್ತಿದ್ದಂತೆ ದೇವಸ್ಥಾನ ಪ್ರದಕ್ಷಿಣೆ ಸಮಯದಲ್ಲಿ ಅಸಂಖ್ಯಾತ ಭಕ್ತರು ಉರುಳುಸೇವೆ ಮಾಡಿದರು. ಅವರನ್ನು ದಾಟಿಕೊಂಡು ಪಲ್ಲಕ್ಕಿ ಹೊತ್ತವರು ಹಾಗೂ ನೇತೃತ್ವ ವಹಿಸಿದ್ದ ಶರಣಪ್ಪ ಶರಣರು ಇತರು ಮುನ್ನಡೆದರು.ರಥೋತ್ಸವದಲ್ಲಿ ಶರಣರ ಕುಟುಂಬದ ಸದಸ್ಯರು, ಪಟ್ಟಣ, ಮೂಡಬೂಳ, ಕರಿಭಾವಿ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ಜಾತ್ರಾ ಮಹೋತ್ಸವ ಅಂಗವಾಗಿ ನಡೆಯಬೇಕಿದ್ದ ದನಗಳ ಜಾತ್ರೆ ರದ್ದುಗೊಂಡಿರುವದು ರೈತರ ಆಕ್ರೋಶಕ್ಕೆ ಕಾರಣವಾಯಿತು. ಇಂದಿನಿಂದ ನಡೆಯಬೇಕಿದ್ದ ದನಗಳ ಜಾತ್ರೆಯನ್ನು ನಿನ್ನೆ ತಾನೇ ರದ್ದುಗೊಳಿಸುವ ತೀರ್ಮಾನ ಕೈಕೊಳ್ಳಲಾಯಿತು. ಆದರೆ ದನಗಳ ಜಾತ್ರೆ ರದ್ದುಗೊಂಡ ಸುದ್ದಿ ತಿಳಿಯದ ರೈತರು ತಮ್ಮ ಜಾನುವಾರುಗಳನ್ನು ತೆಗೆದುಕೊಂಡು ಪಟ್ಟಣಕ್ಕೆ ಬಂದಿದ್ದರು. ಆದರೆ ಜಾತ್ರೆ ರದ್ದುಗೊಂಡ ಸುದ್ದಿ ತಿಳಿದು ರೈತರು ಎಪಿಎಂಸಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು. ಜಾತ್ರೆಯನ್ನು ರದ್ದುಗೊಳಿಸುವ ತೀರ್ಮಾನ 3-4 ದಿನಗಳ ಮೊದಲು ಕೈಕೊಂಡಿದ್ದರೆ ನಾವು ಬರುವದು ತಪ್ಪುತ್ತಿತ್ತು ಎಂದು ರೈತರು ಗೊಣಗುತ್ತಾ ಮರಳಿದ ಪ್ರಸಂಗ ನಡೆಯಿತು.

ಸುದ್ದಿ ಓದಿ