ಮಹಲಿಂಗಪುರ

ಸಂಘದ ಶಾಖೆಗಳಲ್ಲಿ ಭಾಗಿಯಾಗುವುದನ್ನು ತಡೆಯುವ ಬಹುದೊಡ್ಡ ಸಂಚು ನಡೆಯುತ್ತಿದೆ

ಸಂಘದ ಶಾಖೆಗಳಲ್ಲಿ ಭಾಗಿಯಾಗುವುದನ್ನು ತಡೆಯುವ ಬಹುದೊಡ್ಡ ಸಂಚು ನಡೆಯುತ್ತಿದೆ

ಹಿಂದೂ ಸಾಮ್ರಾಜ್ಯ ದಿನೋತ್ಸವ ಕಾರ್ಯಕ್ರಮದಲ್ಲಿ ಶಂಕರ ಹಳಂಗಳಿ ಆರೋಪ 

ಮಹಾಲಿಂಗಪುರ 19: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಸಮೀಪದ ಸಮೀರವಾಡಿಯ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಹಿಂದೂ ಸಾಮ್ರಾಜ್ಯ ದಿನೋತ್ಸವ ಆಚರಿಸಲಾಯಿತು. 

ಜಮಖಂಡಿ ಜಿಲ್ಲಾ ಘೋಷ ಪ್ರಮುಖರಾದ ಶಂಕರ ಹಳಿಂಗಳಿ ಮಾತನಾಡಿ, ಸಾಕಷ್ಟು ಅಡೆತಡೆಗಳ ಮಧ್ಯೆಯೂ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಸಾಮ್ರಾಜ್ಯ ಕಟ್ಟಲು ಸರ್ವಸ್ವವನ್ನೂ ತ್ಯಾಗ ಮಾಡಿದರು. ಆದರೆ ಆಗಿನ ಕಾಲದಲ್ಲಿಯೂ ಸೈನಿಕರನ್ನು ದಾರಿತಪ್ಪಿಸುವ ಹಾಗೂ ಹೋರಾಟದಿಂದ ವಿಮುಖರನ್ನಾಗಿಸುವ ದೊಡ್ಡ ಸಂಚು ನಿರಂತರ ನಡೆಯಿತು ಅಂತಹ ಸಂದಿಗ್ಧತೆಯಲ್ಲಿಯೂ ಶಿವಾಜಿ ಮಹಾರಾಜರು ಹಿಂಜರಿಯದೇ ಸುಭದ್ರ ಹಿಂದೂ ರಾಷ್ಟ್ರ ಕಟ್ಟುವಲ್ಲಿ ಯಶಸ್ವಿಯಾದರು ಅವರ ದೇಶಭಕ್ತಿ ನಮಗೆಲ್ಲಾ ಮಾದರಿ, ಅದೇ ಪ್ರಸ್ತುತ ಸನ್ನಿವೇಶದಲ್ಲಿಯೂ ದೇಶಭಕ್ತರನ್ನು ಮತ್ತು ಹಿಂದೂಗಳನ್ನು ದಾರಿ ತಪ್ಪಿಸುವ ಹಾಗೂ ಸಂಘದ ಶಾಖೆಗಳಲ್ಲಿ ಭಾಗವಹಿಸುವುದನ್ನು ತಡೆಯುವ ಬಹುದೊಡ್ಡ ಸಂಚು ನಡೆಯುತ್ತಿದ್ದು ಯುವಕರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಜಗರೂಕರಾಗಿ ಒಂದಾಗಿ ಅಪಾಯಗಳಿಂದ ರಾಷ್ಟ್ರವನ್ನು ಕಾಪಾಡಲು ಪಣತೊಟ್ಟು ಸಂಘದ ಶಾಖೆಗಳಲ್ಲಿ ತಪ್ಪದೇ ಭಾಗವಹಿಸಿ ಸಂಸ್ಕಾರ, ಶಿಸ್ತು, ನಿಷ್ಠೆ ಅಳವಡಿಸಿಕೊಳ್ಳಬೇಕಾಗಿದೆ ಎಂದರು. 

ಸಮೀರವಾಡಿಯ ಜಿಬಿಎಲ್ ಜನರಲ್ ಮ್ಯಾನೇಜರ್ ಸೋಮಶೇಖರ ಪೇಟಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗಿ ಸಂಸ್ಕಾರ ಮತ್ತು ಸುಸಂಸ್ಕೃತಿಯಿಂದ ದೂರಾವಾಗುತ್ತಿರುವುದು ವಿಷಾದನೀಯ ಹಾಗಾಗಿ ಸಂಘದ ಶಾಖೆಗಳಲ್ಲಿ ತಪ್ಪದೇ ಭಾಗವಹಿಸಿ ಸಂಸ್ಕಾರ ರೂಢಿಸಿಕೊಳ್ಳಲು ತಿಳಿಸಿದರು.  

ಪ್ರದೀಪ ಸೋನಾರ ಮತ್ತು ಶಂಕರಗೌಡ ಬಂದಪ್ಪಗೌಡ್ರ ವೈಯಕ್ತಿಕ ಗೀತೆಯೊಂದಿಗೆ, ಬಸವರಾಜ ಬಾದನ ಅಮೃತ ವಚನ, ದೀಪಕ ಖಾನಗೌಡ್ರ ಅತಿಥಿ ಪರಿಚಯಿಸಿ, ಸಂಕೇತ ಮಹಾಲಿಂಗಪುರಮಠ ಪ್ರಾರ್ಥಿಸಿ, ಉಜ್ವಲ ಕೊಲ್ಲಾಪುರ ವಂದಿಸಿದರು.ಸಾಗರ ಭೋವಿ, ವಿಶ್ವನಾಥ ಪೀರಶೆಟ್ಟಿ ಸೇರಿದಂತೆ ಗಣ್ಯರು, ತಾಯಂದಿರು ಇದ್ದರು. 


ಸುದ್ದಿ ಓದಿ