ಮಲಮೂತ್ರ ವಿಸರ್ಜನೆಯ ಕೊಳಚೆ ಪ್ರದೇಶವೀಗ ಸುಂದರ ಪ್ರವಾಸಿ ತಾಣ
ಸಿ ಹನಮಂತ ನಾವಿ
ಮಹಾಲಿಂಗಪುರ : ಕೊಳಚೆ ಪ್ರದೇಶ, ಅತ್ಯಂತ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡು ತಿರಸ್ಕೃತ ಪ್ರದೇಶವಾಗಿದ್ದ ಸ್ಥಳೀಯ ಕೆಂಗೇರಿಮಡ್ಡಿ ( ಲಕ್ಷಿ??ನಗರ ) ಬಡಾವಣೆ ಪುಸಸಭಾ ಸದಸ್ಯ ಶೇಖರ ಅಂಗಡಿಯವರ ಶ್ರಮದ ಫಲವಾಗಿ ನಂದನವನವಾಗಿ, ಬೃಂದಾವನದಂತೆ ಕಂಗೊಳಿಸುಂತಾಗಿದೆ.
ಕಳೆದ ಒಂಭತ್ತು ತಿಂಗಳಿನಿಂದ ಹಗಲಿರುಳೆನ್ನದೇ ಹಲವಾರು ಅಡೆತಡೆಗಳ ಮಧ್ಯೆಯೂ ಎಡಬಿಡದೇ ಶ್ರಮಿಸಿ ಸ್ಥಳೀಯ ಪುರಸಭೆಯ 2021-22 ನೇ ಸಾಲಿನ ಎಸ್ ಎಫ್ ಸಿ ನಿಧಿ 23 ಲಕ್ಷ ಹಾಗೂ ಶಾಸಕರ ಅನುದಾನ 10 ಲಕ್ಷ ರೂ . ಒಟ್ಟು ಕೇವಲ 33 ಲಕ್ಷ ರೂ.ಬಳಸಿ ಹೊಂಡದಲ್ಲಿದ್ದ ಗರಸನ್ನು ಹೆದ್ದಾರಿಗೆ ಕಳುಹಿಸಿ ಮತ್ತು ತಮ್ಮ ಸ್ವಂತ 10 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ 2 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಯನ್ನು ತಮ್ಮ ಚಾಣಾಕ್ಷತೆಯಿಂದ ಪೂರ್ಣಗೊಳಿಸಿ ಸುಂದರ, ಆಕರ್ಷಣೀಯ ಶಿವಸಾಯಿ ಸರೋವರವನ್ನು ನಿರ್ಮಿಸಿ ಅ. 2 ರ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜನ್ಮದಿನದಂದು ಶಾಸಕ ಸಿದ್ದು ಸವದಿಯವರಿಂದ ಲೋಕಾರೆ್ಣ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಸಾರ್ವಜನಿಕರ ಮಲಮೂತ್ರ ವಿಸರ್ಜನಾ ತಾಣವಾಗಿ, ಹೊಲಸು ನೀರಿನ ಗಬ್ಬು ವಾಸನೆ ಹಾಗೂ ಸೊಳ್ಳೆ ಕ್ರಿಮಿ, ಕೀಟಗಳ ಗೂಡಾಗಿದ್ದ ಪ್ರದೇಶವೀಗ ಶಿವಸಾಯಿ ಸರೋವರವಾಗಿ ಲೋಕಾರೆ್ಣಗೊಂಡು ಪ್ರೇಕ್ಷಕರನ್ನು ಕೈಬೀಸಿ ಕರೆಯುತ್ತಿದೆ.
ಸಾಯಿಬಾಬಾ ಮಂದಿರಕ್ಕೆ ಹೊಂದಿಕೊಂಡಿರುವ ಸರೋವರದ ಮಧ್ಯದಲ್ಲಿ ಭವ್ಯ ಶಿವನ ಮೂರ್ತಿ ಪ್ರತಿಷ್ಠಾಪಿಸಿ, ಶಿವನ ಜಡೆಯ ಗಂಗೆಯ ಬಾಯಿಂದ ಚಿಮ್ಮುವ ನೀರು ಹಾಗೂ ಸರೋವರಕ್ಕೆ ಭದ್ರ ತಂತಿ ಬೇಲಿ, ಶೌಚಾಲಯ, ಸರೋವರದ ಸುತ್ತಲೂ ಶ್ರೀ ಮಹಾಲಿಂಗೇಶ್ವರರ ಹಾಗೂ ವಿವಿಧ ರೀತಿಯ ವರ್ಣಚಿತ್ರಗಳು ಆಕರ್ಷಿಸುತ್ತವೆ. ಸರೋವರದಲ್ಲಿ ದೋಣಿ ವಿಹಾರ ಹಾಗೂ ಹೋಟೆಲ್ ಮಾಡಿ ಆದಾಯದ ಮೂಲವನ್ನು ಹೆಚ್ಚಿಸುವ ಕೆಲಸ ನಡೆಯುತ್ತಿದೆ.