ಮುದ್ದೆಬಿಹಾಲ್

ಪ್ರಕರಣಗಳನ್ನು ಲೋಕ್‌ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಳ್ಳಿ: ನ್ಯಾ. ಕೌಶಿಕ್ ಕರೆ

ಪ್ರಕರಣಗಳನ್ನು ಲೋಕ್‌ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಳ್ಳಿ: ನ್ಯಾ. ಕೌಶಿಕ್ ಕರೆ

ಮುದ್ದೇಬಿಹಾಳ 13: ನ್ಯಾಯಾಂಗ ವ್ಯವಸ್ಥೆಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಹಾಗೂ ಶೀಘ್ರವಾಗಿ ಇತ್ಯರ್ಥಪಡಿಸುವಲ್ಲಿ ಲೋಕ್ ಅದಾಲತ್ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಹಾಗೂ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಚಿನ್ ಕೌಶಿಕ್ ಅವರು ಹೇಳಿದರು. ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಮಾತನಾಡಿದರು.

ಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದರಿಂದ ಪಕ್ಷಗಾರರ ಸಮಯ, ಹಣ ಮತ್ತು ಶ್ರಮ ಉಳಿತಾಯವಾಗುತ್ತದೆ. ಅಲ್ಲದೆ, ದೀರ್ಘಕಾಲದ ನ್ಯಾಯಾಂಗ ಪ್ರಕ್ರಿಯೆಯಿಂದ ಉಂಟಾಗುವ ಮಾನಸಿಕ ಒತ್ತಡವೂ ನಿವಾರಣೆಯಾಗುತ್ತದೆ. ಹಾಗಾಗಿ ತಮ್ಮ ಪ್ರಕರಣಗಳನ್ನು ಲೋಕ್‌ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಪಕ್ಷಗಾರರು ಮುಂದೆ ಬರಬೇಕು ಎಂದು ಕರೆ ನೀಡಿದರು.  

ಲೋಕ ಅದಾಲತ್ ನಲ್ಲಿ ಮೂರು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು 7530 ಬಾಕಿ ಇರುವ ಪ್ರಕರಣಗಳಲ್ಲಿ 1906 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ ಒಟ್ಟು 879 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್‌ ಪ್ರಕರಣಗಳು, ಮೆಂಟೇನೆನ್ಸ್‌ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್‌ಎಸಿ ಇಪಿ ಪ್ರಕರಣಗಳು, ಎಮ್‌ವಿಸಿ, ಇ.ಪಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು.   

ಪೂರ್ವದಾವೆ ಪ್ರಕರಣಗಳಲ್ಲಿ,  ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಬಿಎಸ್‌ಎನ್‌ಎಲ್ ಪ್ರಕರಣಗಳು ಹಾಗೂ ಬ್ಯಾಂಕಿನ ಪ್ರಕರಣಗಳು, ಒಟ್ಟು ಸೇರಿ 960 ಪ್ರಕರಣಗಳಲ್ಲಿ 277 ಪ್ರಕರಣಗಳು ರಾಜಿ ಸಂಧಾನದ ಮೂಲಕ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ, ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಮತ್ತು ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಎನ್ ಇವರುಗಳು ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಿರುತ್ತಾರೆ.   


ಸುದ್ದಿ ಓದಿ