ಎನ್ಎಸ್ಎಸ್ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಜಾಗೃತಿ: ಹೂಗಾರ
ಮಹಾಲಿಂಗಪುರ 24: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ಸೇವೆ ಮತ್ತು ಜವಾಬ್ದಾರಿ ಜಾಗೃತವಾಗುತ್ತದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ಗುರುಪ್ರಸಾದ ಹೂಗಾರ ಹೇಳಿದರು.
ಸಮೀಪದ ಭೈರನಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಹಾಲಿಂಗಪುರದ ಕೆಎಲ್ಇ ಡಿಪ್ಲೋಮಾ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಎನ್ಎಸ್ಎಸ್ ವಿಶೇಷ ಶಿಬಿರದಲ್ಲಿ ಮಾತನಾಡಿದರು.
ಏಳು ದಿನದ ವಿಶೇಷ ಶಿಬಿರದಲ್ಲಿ ನಿತ್ಯವೂ ಅನುಭವಿಗಳಿಂದ ದೈನಂದಿನ ಜೀವನದಲ್ಲಿ ಹೊಸ ತಾಂತ್ರಿಕತೆಯ ಮಹತ್ವ, ಧ್ಯಾನ ಮತ್ತು ಯೋಗದ ಮಹತ್ವ, ಮತದಾನ ಜಾಗೃತಿ ಅಭಿಯಾನ, ದುಶ್ಚಟಗಳಿಂದಾಗುವ ಪರಿಣಾಮಗಳು, ಸಾವಯವ ಕೃಷಿ ಲಾಭಗಳು ಎಂಬ ವಿಷಯವಾಗಿ ಉಪನ್ಯಾಸ ಜರುಗಿದವು.
ಶಿಬಿರಾರ್ಥಿಗಳು ಶ್ರಮದಾನದ ಮೂಲಕ ಗ್ರಾಮದ ಪ್ರಮುಖ ಬೀದಿಗಳನ್ನು ಶಾಲೆಯ ಆವರಣಗಳನ್ನು ಸ್ವಚ್ಚಗೊಳಿಸಿ ಶುಚಿತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ನಾನಾ ಮಹನಿಯರ ಜೀವನಾದರ್ಶಗಳ ಬಗ್ಗೆ ತಿಳುವಳಿಕೆ ನೀಡಿದರು.
ಅಂಗಡಿ ಮುಂಗಟ್ಟುಗಳಿಗೆ ಕಸದ ಡಬ್ಬಿ ವಿತರಿಸಿ ತ್ಯಾಜ್ಯ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಿದರು. ಮೂಢನಂಬಿಕೆ ಮತ್ತು ಕಂದಾಚಾರಗಳ ಬಗೆಗಿನ ಅಜ್ಞಾನ ನಂಬಿಕೆ ಹೋಗಲಾಡಿಸಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ಮನವಿ ಮಾಡಿದರು.
ಪ್ರಾಚಾರ್ಯ ಎಸ್.ಐ.ಕುಂದಗೋಳ ಮಾರ್ಗದರ್ಶನದಲ್ಲಿ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಮಹಾದೇವಿ ಅಂಬಿ ಸಂಘಟಿಸಿದ್ದರು. ಸುಣಧೋಳಿ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಜಿ, ಭೈರನಟ್ಟಿ ಮಠದ ರುದ್ರಯ್ಯ ಅಜ್ಜ ಸಾನಿಧ್ಯ ವಹಿಸಿದ್ದರು. ಹುಣಶ್ಯಾಳ(ಪಿವೈ) ಗ್ರಾಪಂ ಅಧ್ಯಕ್ಷ ಪ್ರಕಾಶ ಅಡವಿನವರ, ಸದಸ್ಯೆ ಲಕ್ಷ್ಮೀಬಾಯಿ ಪಾಟೀಲ, ಹಿರಿಯರಾದ ಗಿರೆಪ್ಪ ಈರಡ್ಡಿ, ಅಜ್ಜಪ್ಪ ಗಿರಡ್ಡಿ, ಹನಮಂತ ಜೋಗನ್ನವರ, ಪ್ರಕಾಶ ಸನದಿ, ರಾಯಪ್ಪ ಖವಾಸಿ, ಪ್ರಕಾಶ ಪಾಟೀಲ, ಸವಿತಾ ಗೊಂದಿ, ಸುಭಾಸ್ ಮೂಶಿ, ಉಮೇಶ ಹಾದಿಮನಿ, ಮಿನಾಜ ಅತ್ತಾರ, ಅಮೀತ ಜಾಧವ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಭೈರನಟ್ಟಿ ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.