ಮನರಂಜನೆ

‌ಹಿರಿಯ ನಟ ರಾಜೇಶ್‌ ಇನ್ನಿಲ್ಲ

‌ಹಿರಿಯ ನಟ ರಾಜೇಶ್‌ ಇನ್ನಿಲ್ಲ

ಬೆಂಗಳೂರು: ಫೆಬ್ರವರಿ ೧೯: ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ರಾಜೇಶ್‌ ಅವರು ನಿಧನರಾಗಿದ್ದಾರೆ.

ಅವರಿಗೆ ೮೯ ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ಇಂದು ಬೆಳಗ್ಗಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ.

ಬೆಂಗಳೂರಿನವರೇ ಆದ ರಾಜೇಶ್‌ ಅವರ ಮೂಲ ಹೆಸರು ಮುನಿ ಚೌಡಪ್ಪ. ರಂಗಭೂಮಿಯಲ್ಲಿ ತಮ್ಮನ್ನು ತೀವ್ರವಾಗಿ ಗುರುತಿಸಿಕೊಂಡಿದ್ದರು. ಅಲ್ಲಿ ಅವರನ್ನು ವಿದ್ಯಾ ಸಾಗರ್‌ ಎಂಬ ಹೆಸರಿನಿಂದಲೇ ಗುರುತಿಸಲಾಗುತ್ತಿತ್ತು. ಸಿನೆಮಾ ರಂಗಕ್ಕೆ ಬಂದ ನಂತರ ಅವರ ಹೆಸರು ರಾಜೇಶ್‌ ಎಂದು ಬದಲಾಗಿತ್ತು.

ತಮ್ಮ ಸಹಜ ಅಭಿನಯಕ್ಕೆ ರಾಜೇಶ್‌ ಹೆಸರಾಗಿದ್ದರು. ಯಾವುದೇ ಪಾತ್ರದಲ್ಲಿಯೂ ಲೀಲಾಜಾಲವಾಗಿ ಅಭಿನಯಿಸುತ್ತಿದ್ದರು. ಈ ಕಾರಣದಿಂದಲೇ ಅಭಿಮಾನಿಗಳು ಅವರನ್ನು ಕಲಾತಪಸ್ವಿ ಎಂದೇ ಕರೆಯುತ್ತಿದ್ದರು.

ಅವರು ನಾಯಕರಾಗಿ ನಟಿಸಿದ ಚಲನಚಿತ್ರಗಳು ಯಶಸ್ವಿ ಎನಿಸಿವೆ. ಪೋಷಕ ಪಾತ್ರಗಳಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ನಮ್ಮ ಊರು, ಬೆಳವಲದ ಮಡಿಲಲ್ಲಿ, ಕಪ್ಪು ಬಿಳುಪು, ಬೋರೇಗೌಡ ಬೆಂಗಳೂರಿಗೆ ಬಂದ, ಸೊಸೆ ತಂದ ಸೌಭಾಗ್ಯ ಇತ್ಯಾದಿ  ಹಲವಾರು ಸಿನೆಮಾಗಳಲ್ಲಿ ಭಾವಪೂರ್ಣವಾಗಿ ಅಭಿನಯಿಸಿದ್ದರು. ವರನಟ ರಾಜಕುಮಾರ್‌ ಅವರು ನಾಯಕರಾಗಿ ನಟಿಸಿರುವ ಮರಣದಂಡನೆ ಶಿಕ್ಷೆ ಬೇಡ ಎಂದು ಪ್ರತಿಪಾದಿಸುವ ಬಿಡುಗಡೆ ಚಿತ್ರದಲ್ಲಿ ಸೌಮ್ಯಮೊಗದ ಖಳನಾಯಕರಾಗಿ ಅವರು ಅಭಿನಯಿಸಿದ ರೀತಿ ವಿಶಿಷ್ಟ. ದೇವರದುಡ್ಡು, ಕಲಿಯುಗ ಸಿನೆಮಾಗಳಲ್ಲಿ ಅವರು ಪಾತ್ರ ನಿರ್ವಹಿಸಿದ ರೀತಿ ಅಪಾರ ಜನಮೆಚ್ಚುಗೆ ಪಡೆದಿತ್ತು.

ಸುದ್ದಿ ಓದಿ