ಹಿರಿಯ ನಾಗರಿಕರ ದಿನಾಚರಣೆ: ಹಿರಿಯರಿಗೆ ಗೌರವ, ಆರೈಕೆಗೆ ಆದ್ಯತೆ ನೀಡಲು ಕರೆ
ಲೋಕದರ್ಶನ ವರದಿ
ಹಾವೇರಿ, ಅ. 01: ಹಿರಿಯ ನಾಗರಿಕರ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ವರ್ಷವೀಡೀ ಹಿರಿಯರಿಗೆ ಪ್ರೀತಿ, ಗೌರವ ಹಾಗೂ ಆರೈಕೆ ದೊರೆಯುವಂತಾಗಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶ್ರೀಶೈಲಜಾ ಎಚ್.ವಿ. ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ನಿವೃತ್ತಿಯ ನಂತರ ಹಿರಿಯರ ಸಾಮಾಜಿಕ ಸಂಪರ್ಕ ಹಾಗೂ ಚಟುವಟಿಕೆಗಳು ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಕುಟುಂಬದವರು ಅವರಿಗೆ ಅಗತ್ಯ ಬೆಂಬಲ ನೀಡಬೇಕು. ಸರ್ಕಾರದ ವಿವಿಧ ಯೋಜನೆಗಳು, ಪಿಂಚಣಿ ಸೇರಿದಂತೆ ಸೌಲಭ್ಯಗಳು ಅರ್ಹ ಹಿರಿಯ ನಾಗರಿಕರಿಗೆ ತ್ವರಿತವಾಗಿ ತಲುಪುವಂತೆ ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳಬೇಕು. ಹಿರಿಯ ನಾಗರಿಕರಿಗೆ ಯಾವುದೇ ಸಮಸ್ಯೆ ಎದುರಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.