ಬಳ್ಳಾರಿ

ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ

ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ

ಬಳ್ಳಾರಿ,21: ನಾಡೋಜ ಬುರ‌್ರಕಥಾ ದರೋಜಿ ಈರಮ್ಮ ರಾಷ್ಟ್ರೀಯ ಪ್ರಶಸ್ತಿಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ಸಾಹಿತಿ ಡಾ. ನಿಂಗಪ್ಪ ಮುದೇನೂರು, ಕನ್ನಡ ಸಂಸ್ಕೃತಿ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಚೋರನೂರು ಟಿ ಕೊಟ್ರಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಹಳೇ ದರೋಜಿಯ ಬುರ‌್ರಕಥಾ ಶಿವಮ್ಮ ಮತ್ತು ಬುರ‌್ರಕಥಾ ಕಲಾವಿದ ಸೋಮಲಾಪುರ ಬಲಗೊಲ್ಲ ಮಾರೆಪ್ಪ ಅವರನ್ನು ಆಯ್ಕೆಮಾಡಲಾಗಿದೆ ಎಂದು ನಾಡೋಜ ಬುರ‌್ರಕಥಾ ದರೋಜಿ ಈರಮ್ಮ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಡಾ. ಅಶ್ವ ರಾಮು ಅವರು ತಿಳಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಡಾ. ಅಶ್ವ ರಾಮು ಅವರು ನಾಡೋಜ ಬುರ‌್ರಕಥಾ ಈರಮ್ಮನವರ 10ನೇ ಪುಣ್ಯಸ್ಮರಣೆಯ ಅಂಗವಾಗಿ ನಗರದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಆ. 24 ರಂದು ಶನಿವಾರ ಬೆ. 10-30 ಗಂಟೆಗೆ ಆಯೋಜಿಸಿರುವ “ಬುರ‌್ರಕಥಾ ಪರಂಪರೆಯ ಅನನ್ಯತೆ” ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಾಗೂ ನಾಡೋಜ ಬುರ‌್ರಕಥಾ ದರೋಜಿ ಈರಮ್ಮ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 2023-24ನೇ ಸಾಲಿನ ಪ್ರಶಸ್ತಿಗಳನ್ನು ರಾಯಚೂರು ವಿವಿ ಕುಲಪತಿ ಪ್ರೊ. ಹರೀಶ್ ರಾಮಸ್ವಾಮಿ ಅವರು ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು. 

ಕಾರ್ಯಕ್ರಮವನ್ನು ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ ರವಿ ಅವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ ಎಂ ಮೇತ್ರಿ, ವೀವಿ ಸಂಘದ ಕಾರ್ಯದರ್ಶಿ ಡಾ. ಅರವಿಂದ ಪಟೇಲ್, ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಕರ್ನಾಟಕ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಣ್ಣ ಮಾರೆಪ್ಪ, ಕರ್ನಾಟಕ ಜಾನಪದ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ್ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಳೇ ದರೋಜಿಯ ಅಶ್ವ ರಾಮಣ್ಣ ಉಪಸ್ಥಿತರಿರುವರು. 

ಉಪನ್ಯಾಸ: “ಬುರ‌್ರಕಥಾ ಪರಂಪರೆಯ ಅನನ್ಯತೆ” ಕುರಿತು ಹಂಪಿ ಕನ್ನಡ ವಿವಿಯ ಹಿರಿಯ ಪ್ರಾಧ್ಯಾಪಕ, ಜಾನಪದ ವಿದ್ವಾಂಸ ಪ್ರೊ. ಚಲುವರಾಜು ಅವರು ವಿಶೇಷ ಉಪನ್ಯಾಸ ನೀಡುವರು. 

ಕಾರ್ಯಕ್ರಮ ವಿಶೇಷತೆ: ವಾರ್ತಾ ಇಲಾಖೆ ನಿರ್ಮಿಸಿರುವ ದರೋಜಿ ಈರಮ್ಮನವರ ಸಾಕ್ಷ್ಯಚಿತ್ರ, ಮಂಜುನಾಥ ಗೋವಿಂದವಾಡ ಅವರ ಕುಂಚದಲ್ಲಿ ಅರಳಿರುವ ರೇಖಾಚಿತ್ರ, ಡಾ.ಅಶ್ವ ರಾಮು ಸಂಗ್ರಹಿಸಿರುವ ಛಾಯಚಿತ್ರ, ಬುರ‌್ರಕಥಾ ಗಾಯನ, ತತ್ವಪದ, ಜಾನಪದ ಗೀತಾಗಾಯನ, ವಚನ ಗಾಯನ ಮತ್ತು ಜನಪದ ನೃತ್ಯ ಪ್ರದರ್ಶನ ಇರುತ್ತದೆ.  

ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಂ. ಶರಣಬಸವನಗೌಡ, ಪ್ರಾಚಾರ್ಯ ಡಾ. ಸತೀಶ ಹಿರೇಮಠ ಹಾಗೂ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಡಾ. ಅಶ್ವ ರಾಮು ಅವರು ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದ್ದಾರೆ. ನಾಡೋಜ ಬುರ‌್ರಕಥಾ ಈರಮ್ಮ ಫೌಂಢೇಷನ್ ಹಾಗೂ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಕಾರ್ಯಕ್ರಮ ಜರಗುವುದು. 


ಸುದ್ದಿ ಓದಿ