ದುಶ್ಚಟಗಳಿಂದ ದೂರವಿದ್ದು ಸಮಾಜ ಉದ್ಧರಿಸಿ : ಬಸವರಾಜ ಸ್ವಾಮಿ
ಮಹಾಲಿಂಗಪುರ 24: ಜಂಗಮರು ಒಳಪಂಗಡ ಬೇಧ ಭಾವ ಮರೆತು ಸರ್ವರೂ ಒಂದಾಗಿ ಸಮಾನತೆ ಮೆರೆದಾಗ ಉಳಿದ ಸಮಾಜದವರಿಗೆ ಸಮಾನತೆ ತೋರಲು ಸಾಧ್ಯ ಎಂದು ಕಳ್ಳಿಗುದ್ದಿ-ಕಪರಟ್ಟಿ ಗುರುದೇವಾಶ್ರಮದ ಬಸವರಾಜ ಸ್ವಾಮಿ ಹೇಳಿದರು.
ಸ್ಥಳೀಯ ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬರಗಿ ಓಣಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೇಣುಕಾರ್ಯ ಜಯಂತಿ ಉದ್ಘಾಟಿಸಿ, ಪ್ರವಚನ ನೀಡಿ ಮಾತನಾಡಿ, ರೇಣುಕಾಚಾರ್ಯರು ಅವತರಿಸದಿದ್ದರೆ ವೀರಶೈವ ಅಥವಾ ಲಿಂಗಾಯತ ಧರ್ಮವೇ ಇರುತ್ತಿರಲಿಲ್ಲ, ಅನೇಕ ಜನ್ಮಗಳ ಪುಣ್ಯದ ಫಲವೇ ಮಾನವ ಜನ್ಮ, ಪರಮಾತ್ಮನ ನಾಮಸ್ಮರಣೆಯಿಂದ ಜನ್ಮ ಸಾರ್ಥಕ ಮಾಡಿಕೊಳ್ಳಿ ಮತ್ತು ಜಂಗಮ ಕುಲದಲ್ಲಿ ಹುಟ್ಟಿದವರು ಶಿವನ ಮಕ್ಕಳು, ಎಲ್ಲಾ ದುಶ್ಚಟಗಳಿಂದ ದೂರವಿದ್ದು ಜಗತ್ತಿಗೆ ಸನ್ಮಾರ್ಗ ತೋರಿಸಿ ಎಂದರು.
ಸಂಘದ ನಿರ್ದೇಶಕ ಗುರುಲಿಂಗಯ್ಯ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ರೇಣುಕರು 1008 ಜಾತಿಗಳಿಗೆ ಜಗದ್ಗುರುಗಳು, ಜಗತ್ತನ್ನು ಉದ್ಧರಿಸಲು ನಾಲ್ಕೂ ಯುಗಗಳಲ್ಲಿಯೂ ಅವತಾರವೆತ್ತಿ ಮಾನವ ಕುಲ ಮತ್ತು ಮಾನವ ಧರ್ಮದ ಜಯಕ್ಕೆ ಶ್ರಮಿಸಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಗುರುಪಾದಯ್ಯ ಚಟ್ಟಿಮಠ ಅಧ್ಯಕ್ಷತೆ ವಹಿಸಿ, ಉಪಾಧ್ಯಕ್ಷ ಬಸವರಾಜ ಹಿಟ್ಟಿನಮಠ, ಮಹಾಂತೇಶ ಹಿಟ್ಟಿನಮಠ, ಸದಸ್ಯರಾದ ಡಾ.ವಿ.ಎಸ್.ಮಮದಾಪುರಮಠ, ಎಮ್.ಆರ್.ಹಿರೇಮಠ, ಬಸಯ್ಯ ಚಟ್ಟಿಮಠ, ವಿರೂಪಾಕ್ಷಯ್ಯ ಪಂಚಕಟ್ಟಿಮಠ, ಸಾಗರ ಮಠದ, ಸದಾಶಿವಯ್ಯ ಹಿರೇಮಠ, ವಕೀಲ ಎಂ.ಎಸ್.ಮನ್ನಯ್ಯನವರಮಠ, ಮಹೇಶ ಮನ್ನಯ್ಯನವರಮಠ ಇತರರಿದ್ದರು.
ಎಮ್.ಎಸ್.ತೆಗ್ಗಿನಮಠ ಪ್ರಸಾದ ವ್ಯವಸ್ಥೆ ಮಾಡಿದ್ದರು, ಸುಧಾರಾಣಿ ಸಾಗರ ಮಠದ ಪ್ರಾರ್ಥಿಸಿ, ಶಿಕ್ಷಕ ಕೆ.ಎಸ್.ಹಿರೇಮಠ ಸ್ವಾಗತಿಸಿ, ಶಿಕ್ಷಕ ಎಮ್.ಎಸ್.ಮಠ ನಿರೂಪಿಸಿದರು.