ನಾಟಕ, ಬಯಲಾಟ, ಭಜನೆಗಳಂತಹ ಕೆಲ ಕಲೆಗಳನ್ನು ಉಳಿಸಿ ಬೆಳೆಸಿ
ಬಳ್ಳಾರಿ 10: ಅಂಟಿಕೊಂಡಂತೆ ಇರುವ ಕಪ್ಪಗಲ್ಲು, ಸಿರಿವಾರ ಗ್ರಾಮಗಳು ಬಯಲಾಟ, ದೊಡ್ಡಾಟ ಕಲೆಗಳಿಗೆ ಹಾಗೂ ಕನ್ನಡ ನುಡಿ ಸೇವೆಗೆ ಸದಾ ಹೆಸರುವಾಸಿ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಿರಿವಾರ ಮೂಲೆಮನೆ ಶಿವರುದ್ರ್ಪ ಹೇಳಿದರು.
ಅವರು ದಿ.8 ರವಿವಾರ ಇಲ್ಲಿಯ ‘ಕಪ್ಪಗಲ್ಲು ನಾಟಕೋತ್ಸವ’ದ ಸಮಾರೋಪ ಹಾಗೂ ನಾಟಕ ಪ್ರದರ್ಶನ ಸಮಾರಂಭದಲ್ಲಿ ಚಾಲನೆಗೊಳಿಸಿ ಮಾತನಾಡುತ್ತಿದ್ದರು.
ಸುತ್ತಮುತ್ತಲಿನ ಗ್ರಾಮಸ್ಥರು, ಹಿರಿಯರು ಇಲ್ಲಿಯವರೆಗೂ ಬಯಲಾಟ, ಭಜನೆಗಳಂತಹ ಕೆಲ ಕಲೆಗಳನ್ನು ಉಳಿಸಿ ಬೆಳೆಸಿಕೊಂಡೇ ಬಂದಿರುವರು. ಇತ್ತೀಚಿನ ದಶಕಗಳಿಂದ ಬಳ್ಳಾರಿಗೆ ಸಂಚರಿಸುವ ಸರ್ಕಾರಿ ಬಸ್ಗಳನ್ನು ‘ಕನ್ನಡ ರಥ’ ದಂತೆ ಸಿಂಗರಿಸಿ ನಾಡಿನಾದ್ಯಂತ ಗಮನಾರ್ಹ ವೆನಿಸಿದ್ದು, ನಾಲ್ಕು ದಿನಗಳ ಈ ನಾಟಕಗಳ ಪ್ರದರ್ಶನಗಳನ್ನು ಇಂತಹ ಹಬ್ಬದ ದಿನಗಳಲ್ಲೂ ಜನ ಕಿಕ್ಕಿರಿದು ತುಂಬಿ ಮನಸಾರೆ ಆನಂದಿಸುತ್ತಿದ್ದಾರೆ. ಈ ಕಾರ್ಯಕ್ಕಾಗಿ ರಂಗತೋರಣ ಸಂಸ್ಥೆಗೆ ಅಭಿನಂದನೆಗಳು ಸಲ್ಲಬೇಕೆಂದರು.
ಇನ್ನೋರ್ವ ಅತಿಥಿ ಬೆಂಗಳೂರು ಕರ್ನಾಟಕ ನಾಟಕ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಪ್ರೊ.ಆರ್. ಭೀಮಸೇನ ಮಾತನಾಡುತ್ತ ಮೊದಲದಿನ ‘ಕೃಷ್ಣ ಸಂಧಾನ’ ಕಂಡು ನಕ್ಕು ನಲಿದು ನೀವು ಎರಡನೇ ದಿನ ‘ತಂಗಿ ಗಡಗಿ ಜ್ವಾಕಿ’ ಮಾಡಿದ್ದೀರಿ. ನಿನ್ನೆ ಗಣೇಶ ಚವತಿಯಂದು ‘ಹೇಮರೆಡ್ಡಿ ಮಲ್ಲಮ್ಮ’ನ ಸಂಪೂರ್ಣ ಭಕ್ತಿಯಿಂದ ಪರಮೇಶ್ವರನನ್ನು ಕಂಡು ಪುನೀತರಾಗಿದ್ದೀರಿ ಇಂದು ‘ಮುದುಕನ ಮದುವೆ’ ಮಾಡಿಯೇ ಆನಂದಿಸಬೇಕೆಂದು ಮಾರ್ಮಿಕವಾಗಿ ನುಡಿದರು. ನಾಲ್ಕು ದಿನ ಬೇರೆ ನಾಟಕಗಳನ್ನು ಈ ಗ್ರಾಮದಲ್ಲಿ ಸುಂದರ ಥೇಟರ್ ನಿರ್ಮಿಸಿ ತೋರಿಸಿದ್ದ ರಂಗತೋರಣ ಹಾಗೂ ಕಪ್ಪಗಲ್ಲು ಗ್ರಾಮ ನಾಡಿನಲ್ಲಿ ಹೆಸರುವಾಸಿಯಾಗಲಿ ಎಂದು ಹಾರೈಸಿದರು.
ಗ್ರಾಮದ ಮಧ್ಯದಲ್ಲೇ ಇರುವ ಚಿಕ್ಕ ರಂಗಮಂದಿರವನ್ನು ಬಳಸಿಕೊಂಡು ಬಿಜಾಪುರದ ಹಾನಗಲ್ ಕುಮಾರೇಶ್ವರ ನಾಟ್ಯ ಸಂಘದ ಎಲ್ಲ ಪರಿಕರಗಳನ್ನು ತಂದು ರಂಗ ಸಜ್ಜಿಕೆ ನಿರ್ಮಾಣ ಮಾಡಿ ನಾಲ್ಕು ದಿನ ಜೊತೆಗಿದ್ದ ಮಾಲಿಕರು ಆದ ಶ್ರೀಧರ ಹೆಗಡೆ ಅವರನ್ನು ರಂಗತೋರಣ ಪರವಾಗಿ ಮತ್ತು ಕಪ್ಪಗಲ್ಲು ಗ್ರಾಮಸ್ಥರು ಶಾಲು ಹೊದಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮೂರು ದಿನ ಮಳೆ ಸುರಿದರೂ ನಾಟಕಕ್ಕೆ ತೊಂದರೆ ಆಗದಂತೆ ನೋಡಿ ಪ್ರೋತ್ಸಾಹಿಸಿದ ಗ್ರಾಮಸ್ಥರ ಕಲಾಭಿರುಚಿಯನ್ನು ಪ್ರಸಂಶಿಸಿದರು. ರಂಗತೋರಣದ ಪ್ರೀತಿಯ ಆಹ್ವಾನದಿಂದಾಗಿ ಸುಮಾರು 400 ಕಿ.ಮೀ ದೂರದಿಂದ ಸಾಮಾನು ಸರಂಜಾಮು ತಂದು ರಂಗ ಸಜ್ಜಿಕೆ ನಿರ್ಮಿಸಿದ್ದು ಸಾರ್ಥಕವಾಯಿತೆಂದರು.
ಇದೇ ಸಂದರ್ಭದಲ್ಲಿ ಈ ನಾಟಕೋತ್ಸವದಲ್ಲಿ ಮೂರು ನಾಟಕಗಳನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ ಎಲ್ಲದರಲ್ಲೂ ಸ್ತ್ರೀ ಪಾತ್ರದಿಂದಲೇ ಅಭಿನಯಿಸಿ ಗ್ರಾಮದ ಗಂಡು ಹಾಗೂ ಹೆಣ್ಣು ಮಕ್ಕಳು ಅಭಿಮಾನ ಪಡುವಂತೆ ಮಾಡಿದ ನಿರ್ದೇಶಕ ಮಹದೇವ ಹೊಸೂರು ಅವರನ್ನು ಗ್ರಾಮಸ್ಥರು ಸ್ತ್ರೀ ಪಾತ್ರವೇಷದಲ್ಲೇ ಶಾಲು ಹೊದಿಸಿ ಸನ್ಮಾನಿಸಿದರು. ಹಾಗೂ ನಾಲ್ಕು ದಿನ ಗಮನಾರ್ಹ ನಾಟಕಗಳನ್ನು ಗ್ರಾಮಕ್ಕೆ ಕರೆತಂದ ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹಾಗೂ ನಾಟಕೋತ್ಸವ ಸಂಚಾಲಕ ಅನಿಲಕುಮಾರ ಅಂಗಡಿ ಅವರನ್ನು ಗ್ರಾಮದ ಹಿರಿಯರು ಶಾಲು ಹೊದಿಸಿ ಹಾರ ಹಾಕಿ ಅಭಿಮಾನ ಸೂಚಿಸಿದರು.
ವೇದಿಕೆಯಲ್ಲಿ ತಮ್ಮ ಎಂದಿನ ಕಂಚಿನ ಕಂಠದಲ್ಲಿ ಭಾವಪೂರ್ಣವಾಗಿ ಭಾವಗೀತೆ ಹಾಡಿದ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಇದ್ದರು. ಆರಂಭದಲ್ಲಿ ಕು.ಬಿಂದು ಅವರ ಶಾರದಾ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಗಿ ಶಂಭುಲಿಂಗ ಶಿಕ್ಷಕರು ಸ್ವಾಗತಿಸಿದರು. ಪ್ರಭುದೇವ ಅವರು ಕಪ್ಪಗಲ್ಲು ನಾಟಕೋತ್ಸವ ಕುರಿತು ಪ್ರಾಸ್ತಾವಿಕ ನುಡಿದರು. ಸಂಚಾಲಕ ಅನಿಲ ಕುಮಾರ ಅಂಗಡಿ ವಂದಿಸಿದರು.
ಸಂಜೆ 6.30 ರಿಂದ ಗ್ರಾಮದ ಶಾಲಾ ಮಕ್ಕಳಿಂದ ಹಾಡು, ನೃತ್ಯಗಳು ನಡೆದವು. ಸಭಾ ಕಾರ್ಯಕ್ರಮದ ನಂತರ ಗದುಗಿನ ಪಂಡಿತ ಪಂಚಾಕ್ಷರ ಗವಾಯಿಗಳ ಕಂಪನಿಯಿಂದ ‘ಮುದುಕನ ಮದುವೆ’ ನಾಟಕ ಪ್ರದರ್ಶನವಾಯಿತು. ಇಂದು ಮಳೆ ಬರದ ಕಾರಣ ಗ್ರಾಮಸ್ಥರೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.