ಸವದತ್ತಿ: ಸಂಭ್ರಮದಿಂದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ
ಸವದತ್ತಿ ಸೆ.25: ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗೌರಿ-ಗಣೇಶ ಮೂರ್ತಿಗಳ 11ನೇ ದಿನದ ವಿಸರ್ಜನಾ ಕಾರ್ಯಕ್ರಮ ಗುರುವಾರ ಭಕ್ತಿ-ಭಾವ ಹಾಗೂ ಸಡಗರ-ಸಂಭ್ರಮದಿಂದ ನಡೆಯಿತು. ಹನ್ನೊಂದು ದಿನಗಳ ಕಾಲ ನಿರಂತರವಾಗಿ ಪೂಜೆ-ಪುನಸ್ಕಾರಗಳನ್ನು ಸ್ವೀಕರಿಸಿದ ವಿಘ್ನೇಶ್ವರನಿಗೆ ಭಕ್ತರು ಅಂತಿಮ ನಮನ ಸಲ್ಲಿಸಿದರು. ಈ ವೇಳೆ ತೆಂಗಿನಕಾಯಿಯನ್ನು ಪೂಜಿಸಿ ಸವಾಲು ಹಾಕುವ ಸಂಪ್ರದಾಯದಂತೆ ಭಕ್ತರು ಕಾಯಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಒಂದು ವರ್ಷದವರೆಗೆ ಪೂಜೆ ಸಲ್ಲಿಸುವ ವಿಧಿ-ವಿಧಾನಗಳನ್ನು ನೆರವೇರಿಸಿದರು. ಗಣಪತಿ ಬಪ್ಪಾ ಮೋರಿಯಾ, ಮುಂದಿನ ವರ್ಷ ಬೇಗ ಬಾ ಎಂಬ ಘೋಷಣೆಗಳು ಮೊಳಗಿದವು.
ಯುವಕರು ಕೇಸರಿ ಶಾಲುಗಳನ್ನು ಧರಿಸಿ, ಆಎ ಸದ್ದಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಮಹಿಳೆಯರು ಹಾಗೂ ಮಕ್ಕಳ ಉತ್ಸಾಹವೂ ಗಮನ ಸೆಳೆಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸವದತ್ತಿ ಪೊಲೀಸ್ ವೃತ್ತ ನೀರೀಕ್ಷಕ ಸುರೇಶ ಬೆಂಡೆಗುಂಭಳ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಸವದತ್ತಿಯಲ್ಲಿ ಪ್ರತಿವರ್ಷವೂ ಶಾಂತಿ, ಸೌಹಾರ್ದತೆ ನೆಲೆಸಿದ್ದು, ಹಿಂದೂ-ಮುಸ್ಲಿಂ ಒಗ್ಗಟ್ಟಿನ ಬಲವಿದೆ ಎಂದು ತಿಳಿಸಿದರು. ಸಿಬ್ಬಂದಿ ವರ್ಗದವರ ಸಹಕಾರದಿಂದ ಒಟ್ಟಾರೆಯಾಗಿ ಶಾಂತಿ ಹಾಗೂ ಸುವ್ಯವಸ್ಥೆಯೊಂದಿಗೆ ವಿಸರ್ಜನಾ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು.