ಮನುಷ್ಯರಾಗಿ ಮನುಷ್ಯರನ್ನು ಹುಡುಕಾಡಿ : ಡಾ.ಸತ್ಯಾನಂದ ಪಾತ್ರೋಟ
ಲೋಕದರ್ಶನ ವರದಿ
ಹಾರೂಗೇರಿ : ನುಡಿದಂತೆ ನಡೆದು ತೋರಿದ ಗಾಂಧೀಜಿ, ಪರಸ್ಪರರನ್ನು ಪ್ರೀತಿಸುವುದು, ನಂಬುವುದು ಅವರ ವ್ಯಕ್ತಿತ್ವವಾಗಿತ್ತು. ನಾವಿಂದು ಮನುಷ್ಯರಾಗಿ ಮನುಷ್ಯರನ್ನು ಹುಡುಕುವ ಸನ್ನಿವೇಶ ಎದುರಾಗಿದೆ ಎಂದು ಬಾಗಲಕೋಟದ ಜಾಜಿಮಲ್ಲಿಗೆ ಕವಿ ಡಾ.ಸತ್ಯಾನಂದ ಪಾತ್ರೋಟ ಹೇಳಿದರು.
ಸ್ಥಳೀಯ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ನಡೆದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ ಬಹದ್ದೂರ ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಳ್ಗೊಂಡು ಅವರು ಮಾತನಾಡಿದರು.
ಬಹುತ್ವ ಭಾರತವನ್ನು ಉಳಿಸುವುದು ಈ ಮಹಾನ್ ವ್ಯಕ್ತಿಗಳ ಮುಖ್ಯ ಉದ್ಧೇಶವಾಗಿತ್ತು. ಕಾಲದೊಳಗಿದ್ದು, ಕಾಲವನ್ನು, ಜಾತಿಯೊಳಗಿದ್ದು ಜಾತಿಯನ್ನು, ಧರ್ಮದೊಳಗಿದ್ದು ಧರ್ಮವನ್ನು ಮೀರಿದ ಗಾಂಧೀಜಿ ರಾಮರಾಜ್ಯದ ಕನಸು ಕಂಡವರು. ಜಗತ್ತು ಕಂಡ ಈ ಫಕೀರನನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ರಸವಿಮರ್ಶಕ ಸಾಹಿತಿ ಡಾ.ವಿ.ಎಸ್.ಮಾಳಿ ಅಧ್ಯಕ್ಷೀಯಪರ ನುಡಿಗಳನ್ನಾಡುತ್ತ ಇಂದು ಗಾಂಧೀಜಿಯವರನ್ನು ಬೆಳೆಸುವುದನ್ನು ಬಿಟ್ಟು ಗುಂಡಾಗಿರಿಯನ್ನು ಬೆಳೆಸುತ್ತಿದ್ದು, ಹೀಗಿದ್ದಾಗ ರಾಮರಾಜ್ಯವನ್ನು ನಿರ್ಮಿಸುವುದು ಸಾಧ್ಯವಿಲ್ಲ. ಕಾಲ ಕಳೆದಂತೆ ಈ ಮಹಾನ್ ವ್ಯಕ್ತಿಗಳನ್ನು ನಾವು ಮರೆತರೂ, ಈ ನೆಲ ಮಾತ್ರ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.