ಪಾಂಡುರಂಗ ರುಕ್ಮಿಣಿ ದೇವಸ್ಥಾನದಲ್ಲಿ ಗೋಂಧಳಿ ಸಮಾಜದಿಂದ ಸಪ್ತಾಹ
ಬಳ್ಳಾರಿ 10: ಇಲ್ಲಿನ ಅಗ್ನಿಶಾಮಕ ಠಾಣೆ ಬಡಾವಣೆ ಹಿಂಭಾಗದಲ್ಲಿರುವ ಎಂ.ರಾಜೇಶ್ವರಿ ನಗರದ ಪಾಂಡುರಂಗ ರುಕ್ಮಿಣಿ ದೇವಸ್ಥಾನದಲ್ಲಿ ವಿಠ್ಠಲ ಗೋಂಧಳಿ ಸಮಾಜದಿಂದ ಹಮ್ಮಿಕೊಂಡಿದ್ದ ಅಷ್ಟಮ ವರ್ಷದ ಪಾಂಡುರಂಗ ಸಪ್ತಾಹ ಆಚರಣೆ ಸಂಪನ್ನಗೊಂಡಿತು. ಆಗಸ್ಟ್ 7 ರಂದು ಶ್ರಾವಣ ಮಾಸದ ತೃತೀಯ ಬುಧವಾರದಂದು ಸಂತ ಜ್ಞಾನೇಶ್ವರ ಮಹಾರಾಜ ವಿರಚಿತ ಭಗವದ್ಗೀತೆಯ ಮರಾಠಿ ಪರಿಭಾಷೆಯ ಮೂರ್ತಿ ಸ್ಥಾಪನೆ ನೆರವೇರಿತು.
ಮೂರು ದಿನ ಜರುಗಿದ ಈ ಧಾರ್ಮಿಕ ಆಚರಣೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮಂದಿರದ ಪ್ರಧಾನ ಧರ್ಮಕರ್ತರು, ಆರ್ಚಕರೂ ಆಗಿರುವ ವಿಜಯರಾವ್ ಬಿ.ಕರಣಂ ಅವರ ನೇತೃತ್ವದಲ್ಲಿ ರುಕ್ಮಿಣಿ ಪಾಂಡುರಂಗ ಸ್ವಾಮಿಗೆ ಜಲಾಭಿಷೇಕ, ಪಂಚಾಮೃತಾಭಿಷೇಕ, ಅಷ್ಟೋತ್ತರ ನಾಮಾವಳಿ, ಪೂಜೆ, ಅಲಂಕಾರ ಹಾಗೂ ಮಹಾ ಮಂಗಳಾರತಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅಪರಾಹ್ನ, ಮಧ್ಯಾಹ್ನ ಮತ್ತು ಸಂಜೆಯಿಡೀ ಸಂತ ಮಂಡಳಿಯಿಂದ ಕೀರ್ತನೆಗಳು, ಪುರಾಣ ಕಾಲಕ್ಷೇಪಗಳು ನಡೆದವು. ಆ.8ರಂದು ಚೌತಿ ದಿನ ಯಥಾರೀತಿ ಧಾರ್ಮಿಕ ಆಚರಣೆಗಳ ಜೊತೆಗೆ ತೀಥ ಪ್ರಸಾದ, ಆ.9ರ ಪಂಚಮಿಯಂದು ಸಪ್ತಾಹದ ವಿಶೇಷ ಅರ್ಚನೆ, ಪೂಜೆ, ಭಜನೆ, ಪಾರಾಯಣ, ಕೀರ್ತನೆಗಳು ನಡೆದವು. ಮಧ್ಯಾಹ್ನ ರುಕ್ಮಿಣಿ ಪಾಂಡುರಂಗ ಸ್ವಾಮಿ ಮೂರ್ತಿಗಳ ಭವ್ಯ ನಗರ ಪ್ರದಕ್ಷಿಣೆ ಜರುಗಿತು. ಈ ಸಪ್ತಾಹದ ಆಚರಣೆಯಲ್ಲಿ ಕೊಪ್ಪಳ, ಗಂಗಾವತಿ, ಗದಗ ಇನ್ನಿತರೆಡೆಗಳಿಂದ ವಾರಕರಿ ಸಂಪ್ರದಾಯಸ್ಥರು, ಪಾಂಡುರಂಗ ಸ್ವಾಮಿಯ ಭಕ್ತರು ಆಗಮಿಸಿದ್ದರು