ಮಾಂಸದ ಅಂಗಡಿಗಳ ಸ್ಥಳಾಂತರಕ್ಕೆ ಜಮೀನು ಕೊಡಿಸುವಂತೆ ಸಂಕೇಶ್ವರ ಕಾಟಿಕ ಸಮಾಜದಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಬೆಳಗಾವಿ : ಪಟ್ಟದ ಪ್ರಮುಖ ರಸ್ತೆಯಲ್ಲಿನ ಮಾಂಸಾಹಾರಿಯ ಮಟನ್, ಚಿಕನ್, ಮೀನು ಮಾರಾಟದ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಪುರಸಭೆ ವತಿಯಿಂದ ಸ್ಥಳಾವಕಾಶ ಮಾಡಿಸಿಕೊಡುವಂತೆ ಜಿಲ್ಲೆಯ ಸಂಕೇಶ್ವರದ ಹಿಂದು ಕಾಟಿಕ (ಖಾಟಿಕ) ಸಮಾಜದ ಬಾಂಧವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಗುರುವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಹಿಂದು ಕಾಟಿಕ (ಖಾಟಿಕ) ಸಮಾಜದ ಬಾಂಧವರು ಈ ಕುರಿತು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಮನವಿಯೊಂದನ್ನು ಸಲ್ಲಿಸಿ, ನಾವು ನಮ್ಮ ಪೂರ್ವಜರ ಕಾಲದಿಂದಲೂ ಸಂಕೇಶ್ವರ ಪಟ್ಟಣದ ಹೃದಯಭಾಗದಲ್ಲಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಸದ್ಯ ಮಾಂಸಾಹಾರ (ಮಟನ್, ಚಿಕ್ಕನ್, ಮೀನು) ವ್ಯಾಪಾರ ಮಾಡುತ್ತಿದ್ದೇವೆ.
ಸದ್ಯ ಈ ಅಂಗಡಿಗಳು ಪಟ್ಟಣದ ಈ ಪ್ರಮುಖ ರಸ್ತೆಯ ಮೂಲಕ ಎಲ್ಲ ಸಮಾಜದ ಜನರು ಹಾದು ಹೋಗುವ ಪ್ರಮುಖ ರಸ್ತೆ ಇದಾಗಿದೆ. ಅಲ್ಲದೆ ಪಟ್ಟಣದ ಶ್ರೀ ಶಂಕರಾಚಾರ್ಯ ಮತ್ತು ಶ್ರೀ ದುರದುಂಡಿಶ್ವರ ಮಠಕ್ಕೆ ಹೋಗುವ ಭಕ್ತರಿಗೂ ಇದೇ ಪ್ರಮುಖ ದಾರಿಯಾಗಿದೆ. ಇದರಿಂದ ಭಕ್ತರಿಗೂ, ನಾಗರಿಕರಿಗೂ ಮುಜುಗರ ಉಂಟಾಗುತ್ತಿದೆ.
ಇದರಿಂದ ನಮಗು ಕೂಡಾ ಈ ಪ್ರಮುಖ ರಸ್ತೆಯಲ್ಲಿ ಮಾಂಸಾಹಾರ (ಮಟನ್, ಚಿಕ್ಕನ್, ಮೀನು) ಮರಾಟ ಮಾಡಲು ಬಹಳ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ ಈ ರಸ್ತೆ ಮೂಲಕ ಹಾದು ಹೋಗುವ ಸಸ್ಯಹಾರಿ ಜನರು ದಿನನಿತ್ಯ ನಮಗೆ ತಕರಾರು ಮಾಡುತ್ತಿದ್ದು, ಇದರಿಂದ ನಮ್ಮ ವ್ಯಾಪಾರ ಮಾಡುವದು ಕಷ್ಟಕರ ವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಮಾಜದವರ ಎಲ್ಲ ಅಂಗಡಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ಎಲ್ಲರ ಒಪ್ಪಿಗೆ ಇರುತ್ತದೆ. ಆದರೆ ನಮಗೆ ಅಂಗಡಿಗಳನ್ನು ಪ್ರಾರಂಭಿಸಲು ಪುರಸಭೆಯವರಿಂದ ಸ್ಥಳದ ಅನುಕೂಲ ಮಾಡಿಕೊಡುವಂತೆ ಸೂಚಿಸುವಂತೆ ಮನವಿಯಲ್ಲಿ ಆಗ್ರಹಿಸಿದರು.
ಒಂದು ವೇಳೆ ಸಂಕೇಶ್ವರ ಪುರಸಭೆ ವತಿಯಿಂದ ಪಟ್ಟಣದಲ್ಲಿ ಎಲ್ಲಾದರು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ನೀಡಿದ್ದಲ್ಲಿ ತಾವು ಅವುಗಳನ್ನು ಬಾಡಿಗೆ ರೂಪದಲ್ಲಿ ಪಡೆಯಲು ಸಿದ್ದರಿದ್ದೇವೆ ಎಂದು ಜಿಲ್ಲಾಧಿಕಾರಿಗಳಿಗೆ ನೀಡಲಾದ ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಭರತ ಭೋಪಳೆ, ಶೈಲೇಂದ್ರ ಶೆಟಕೆ, ಅಪ್ಪಾ ಗೋಲತ ಸೇರಿದಂತೆ ಕಾಟಿಕ ಸಮಾಜದ ಅನೇಕರು ಉಪಸ್ಥಿತರಿದ್ದರು.