ಅಹಿಂದ ಸಂಘಟನೆ ಉತ್ತರ ಕರ್ನಾಟಕ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸದಾಶಿವ ಡಾಂಗೆ
ಪಾಲಭಾವಿ, ಅ.7: ಉತ್ತರ ಕರ್ನಾಟಕ ಭಾಗದ ಅಹಿಂದ ಸಮುದಾಯದ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ ಎತ್ತುವ ಸಮಾಜ ಸೇವಕ ಸದಾಶಿವ ಡಾಂಗೆ ಅವರನ್ನು ಅಹಿಂದ ಸಂಘಟನೆಯ ಉತ್ತರ ಕರ್ನಾಟಕ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಸಿ.ಎಂ. ಕರಡಿಕೊಪ್ಪ ಹಾಗೂ ಯುವ ಮುಖಂಡ ಬಾಳು ತೇರದಾಳ ಅವರು ಈ ಆಯ್ಕೆಯನ್ನು ಪ್ರಕಟಿಸಿದ್ದಾರೆ. ಸದಾಶಿವ ಡಾಂಗೆ ಅವರ ಆಯ್ಕೆಗೆ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಸಿ.ಎಂ. ಕರಡಿಕೊಪ್ಪ, ಯುವ ಮುಖಂಡ ಬಾಳು ತೇರದಾಳ, ಚಿಕ್ಕೋಡಿ ಜಿಲ್ಲಾಧ್ಯಕ್ಷ ರವಿ ಮಾದರ ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಹಿಂದ ಸಮುದಾಯದ ಜನರು ಎದುರಿಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಮೂಲಸೌಕರ್ಯ ಸಮಸ್ಯೆಗಳ ಕುರಿತು ಜನಜಾಗೃತಿ ಮೂಡಿಸುವುದು, ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಜನರ ಸಮಸ್ಯೆಗಳನ್ನು ಸಂಬಂಧಿಸಿದ ವೇದಿಕೆಗಳ ಗಮನಕ್ಕೆ ತರುವುದು ತಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಸದಾಶಿವ ಡಾಂಗೆ ತಿಳಿಸಿದ್ದಾರೆ.
ಅಹಿಂದ ಸಮುದಾಯದ ಹಿಂದುಳಿದ ಹಾಗೂ ಶೋಷಿತ ವರ್ಗದ ಜನರಿಗೆ ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಗೌರವಯುತ ಬದುಕು ದೊರಕಿಸುವ ನಿಟ್ಟಿನಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಉತ್ತರ ಕರ್ನಾಟಕದಾದ್ಯಂತ ವಿಸ್ತರಿಸುವುದಾಗಿ ಅವರು ತಿಳಿಸಿದ್ದಾರೆ.