ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ: ಪರಿಹಾರದ ಭರವಸೆ
ಮಹಾಲಿಂಗಪುರ 12: ಶನಿವಾರ ಆತ್ಮಹತ್ಯೆ ಮಾಡಿಕೊಂಡ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಸ್ನೇಹಾ ಪರೀಟ ಅವರ ಮನೆಗೆ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ತಂಡ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಸ್ಥಳೀಯ ಗಡಾದ ಗಲ್ಲಿಯ ನಿವಾಸಿ ಅಶೋಕ ಪರೀಟ ಮತ್ತು ಗೀತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಮೃತ ಸ್ನೇಹಾ 10 ನೇ ತರಗತಿ, ಸಹೋದರಿ 7 ನೇ ತರಗತಿಯಲ್ಲಿ ಓದುತ್ತಿದ್ದರು. ತಾಯಿ ಗೀತಾ ಅವರು ಅಂಗವಿಕಲರಾಗಿದ್ದು, ತಂದೆ ಅಶೋಕ ಅವರು ಇಸ್ತ್ರಿ ಮಾಡಿ ಇಡೀ ಸಂಸಾರ ನಡೆಸುತ್ತಿದ್ದರು. ಬರುತ್ತಿದ್ದ ಪುಡಿಗಾಸಿನಲ್ಲಿ ಸಂಸಾರ ಸಂಕಷ್ಟದಲ್ಲಿತ್ತು ಇದರ ಮಧ್ಯೆ ಕೊರೋನಾ ಸಂಕಷ್ಟದಿಂದ ಸಾಕಷ್ಟು ಸಾಲ ಮಾಡಿದ್ದರು ಆದರೂ ಸಹ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ಮತ್ತೆ ಸಾಲ ಮಾಡಿ ಮಕ್ಕಳ ಆನ್ ಲೈನ್ ಪಾಠಕ್ಕೆ ಅನುಕೂಲವಾಗುವಂತೆ ಮೊಬೈಲ್ ಕೊಡಿಸಿದ್ದರು.
ಇಷ್ಟೆಲ್ಲಾ ತೊಂದರೆಯ ನಡುವೆ ಎಸ್ ಎಸ್ ಎಲ್ ಸಿ ಪರೀಕ್ಷೆ ಹತ್ತಿರ ಬಂದ ಕಾರಣ ಮಕ್ಕಳಿಗೆ ಚೆನ್ನಾಗಿ ಓದಲು ಬುದ್ಧಿ ಹೇಳಿದ್ದಾರೆ. ಕಿತ್ತು ತಿನ್ನುತ್ತಿದ್ದ ಬಡತನ ಮತ್ತು ಅದರ ಮಧ್ಯೆ ಮತ್ತೆ ಸಾವಿರಾರು ರೂಪಾಯಿ ಸಾಲ ಮಾಡಿ ಮೊಬೈಲ್ ಖರೀದಿಸಿದ ಬಗ್ಗೆ ಮನಸ್ಸಿನಲ್ಲೇ ಕೊರಗುತ್ತಿದ್ದ ಸ್ನೇಹಾ ದುಡುಕಿನ ನಿರ್ಧಾರ ಮಾಡಿ ಮನೆ ಬರಿದು ಮಾಡಿ ಬಾರದ ಲೋಕಕ್ಕೆ ಹೋಗಿದ್ದಾಳೆ ಆದರೆ ತಮ್ಮ ಎರಡು ಕಣ್ಣುಗಳಂತಿದ್ದ ಮಕ್ಕಳಲ್ಲಿ ಸ್ನೇಹಾ ಅಗಲಿಕೆಯನ್ನು ತಾಯಿ ಗೀತಾ ಅರಗಿಸಿಕೊಳ್ಳಲು ಸಾಧ್ಯವಾಗದೇ ರೋಧಿಸುತ್ತಿರುವುದು ಎಂಥವರನ್ನು ನಡುಗಿಸುತ್ತದೆ.
ಮಕ್ಕಳಿಗೆ ಮೊಬೈಲ್ ಪಾಠ ಬೇಡ : ತನ್ನ ಮಗಳು ಆನ್ ಲೈನ್ ಕ್ಲಾಸ್ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಹಾಗಾಗಿ ಆನ್ ಲೈನ್ ಕ್ಲಾಸ್ ಮುಂದುವರೆಸಿ ಮಕ್ಕಳನ್ನು ಕೊಲ್ಲಬೇಡಿ ಎಂದು ಮೃತಳ ತಾಯಿ ಗೀತಾ ಅಧಿಕಾರಿಗಳ ಮುಂದೆ ರೋಧಿಸಿದರು.
ಪರಿಹಾರದ ಭರವಸೆ: ಮಕ್ಕಳು ಪರೀಕ್ಷೆಗೆ ಹೆದರಬಾರದು ಎಂದು ಹೇಳಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಎಂ.ಪತ್ತಾರ ಮಕ್ಕಳ ಕಲ್ಯಾಣ ನಿಧಿಯಿಂದ ಮೃತಳ ಕುಟುಂಬಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿ ಮೃತಳ ತಂದೆ ತಾಯಿಗಳಿಗೆ ಧೈರ್ಯ ಹೇಳಿದರು.
ಮುಖಂಡರಾದ ಸುನಿಲಗೌಡ ಪಾಟೀಲ, ದೈಹಿಕ ಶಿಕ್ಷಣಾಧಿಕಾರಿ ಎನ್.ವಿ.ನಾವಿ, ಶಿಕ್ಷಣ ಸಂಯೋಜಕ ಎಸ್.ಎಸ್.ಹಾದಿಮನಿ ಸಿಆರ್ ಪಿ ಎಸ್.ಎನ್.ಬ್ಯಾಳಿ, ಮುಖ್ಯೋಪಾಧ್ಯಾಯರಾದ ಬಿ.ಎನ್.ಅರಿಕೇರಿ, ಎಂ. ಡಿ. ಕಾಮರೆಡ್ಡಿ ಇತರರು ಇದ್ದರು