ಹಗರಿಬೊಮ್ಮನಹಳ್ಳಿ

ಮೊಟ್ಟೆ ವಿತರಣೆ ಕೈಬಿಡದಂತೆ ರಾಜ್ಯ ಸರ್ಕಾರಕ್ಕೆ ಎಸ್‌ಎಫ್ ಮನವಿ

ಮೊಟ್ಟೆ ವಿತರಣೆ ಕೈಬಿಡದಂತೆ  ರಾಜ್ಯ ಸರ್ಕಾರಕ್ಕೆ ಎಸ್‌ಎಫ್ ಮನವಿ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 12: ರಾಜ್ಯ ಸರಕಾರ ಶಾಲೆಗಳ ಮಕ್ಕಳಿಗೆ ನಿಡುತ್ತಿರುವ ಮೊಟ್ಟೆಗಳನ್ನು ಮೊಟಕುಗೊಳಿಸುವಂತೆ ರಾಜ್ಯದ ಕೆಲ ಮಠಾಧೀಶರು ಸರಕಾರಕ್ಕೆ ಒತ್ತಡ ತರುತ್ತಿದ್ದು, ಸರಕಾರ ಒತ್ತಡಕ್ಕೆ ಮಣಿದು ಮೊಟ್ಟೆ ನೀಡುವ ಕಾರ್ಯ ಮೊಟಕುಗೊಳಿಸದಂತೆ ಎಸ್‌ಎಫ್‌ಐ ಮನವಿ ಮಾಡಿಕೊಂಡಿದ್ದಾರೆ. 

 

ಎಸ್‌ಎಫ್‌ಐನಿಂದ ರಾಜ್ಯದಲ್ಲಿ ಕರೆ ನೀಡಿದ ಹಿನ್ನೆಲೆಯಲ್ಲಿ, ಪಟ್ಟಣದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಎಸ್‌ಎಫ್‌ಐನ ಅವಳಿ ಜಿಲ್ಲೆಗಳ ವಿದ್ಯಾರ್ಥಿ ಮುಖಂಡ ಜಯಸೂರ್ಯ ಮಾತನಾಡಿ, ರಾಜ್ಯದಲ್ಲಿ ಮಕ್ಕಳ ಪೌಷ್ಠಿಕ ಆಹಾರ ಕೊರತೆ ನೀಗಿಸಲು ಮೊಟ್ಟೆ ನೀಡುತ್ತಿರುವುದು ಸ್ವಾಗತಾರ್ಹ, ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿರುವುದು ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಸಮೀಕ್ಷೆ ನಡೆಸಿದೆ. ಪರಿಸ್ಥಿತಿ ಹಿನ್ನೆಲೆಯಲ್ಲಿ ಮೊಟ್ಟೆಯೊಂದು ಪೌಷ್ಠಿಕ ಆಹಾರವಾಗಿದ್ದು, ವಿದ್ಯಾರ್ಥಿಗಳಿಗೆ, ಚಿಕ್ಕ ಮಕ್ಕಳಿಗೆ ಕೊಡುವುದರಿಂದ ಪೌಷ್ಠಿಕದ ಕೊರತೆಯನ್ನು ನೀಗಿಸಿದಂತಾಗುತ್ತದೆ. ಇದರಲ್ಲಿ ಜಾತಿ, ಧರ್ಮಗಳ ಕ್ಷುಲ್ಲಕ ಮನಸ್ಥಿತಿಯನ್ನು ತರದಿರಲಿ. ಸರ್ಕಾರದ ಯೋಜನೆ ಉತ್ತಮವಾಗಿದ್ದು, ಯಾವುದೇ ಒತ್ತಡಕ್ಕೂ ಮಣಿಯದೆ ಯೋಜನೆಯನ್ನು ಮುಂದುವರೆಸಬೇಕು ಎಂದು ತಿಳಿಸಿದರು. 

ಇದಲ್ಲದೆ, ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆಯು ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಮಾತ್ರ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಘೋಷಿಸಿದೆ. ಈ ಮೊಟ್ಟೆ ಮತ್ತು ಬಾಳೆಹಣ್ಣುಗಳ ವಿತರಣೆಯನ್ನು ರಾಜ್ಯಾಧ್ಯಂತ ಇರುವ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು. 

ಈ ವೇಳೆ ತಾಲೂಕು ಸಂಚಾಲಕ ಅಬ್ದುಲ್ ಸುಭಾನ್, ವಿದ್ಯಾರ್ಥಿ ಮುಖಂಡರಾದ ಕಾರ್ತೀಕ್ ಕುಮಾರ್, ವರದರಾಜ್, ಭರತ್, ಜಯಶ್ರೀ, ರಮ್ಯ, ಅಂಜಿನಪ್ಪ ಇತರರಿದ್ದರು. 


ಸುದ್ದಿ ಓದಿ