ಜೀವಾವಧಿ ಶಿಕ್ಷೆ ವಿರುದ್ಧದ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ನವದೆಹಲಿ, ಜನವರಿ 4 : ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿ ತಮಗೆ ನೀಡಿರುವ ಜೀವಾವಧಿ ಶಿಕ್ಷೆ ವಿರುದ್ಧ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಸಲ್ಲಿಸಿರುವ ಮನವಿಯನ್ನು ಜನವರಿ ಮೂರನೇ ವಾರದಲ್ಲಿ ಆಲಿಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.1990 ರ ನವೆಂಬರ್ ನಲ್ಲಿ ಜಮ್ಜೋದ್ ಪುರ ನಿವಾಸಿ ಪ್ರಭುದಾಸ್ ವೈಷ್ಣವಿ ಎಂಬವರ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸಂಜೀವ್ ಭಟ್ ಅವರಿಗೆ ಈ ವರ್ಷದ ಜೂನ್ ನಲ್ಲಿ ಗುಜರಾತ್ ನ ಜಾಮ್ ನಗರದ ಸೆಷನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.
2019 ರ ಅಕ್ಟೋಬರ್ ನಲ್ಲಿ ಗುಜರಾತ್ ಹೈಕೋರ್ಟ್ ಕೂಡ ಭಟ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತು ಮಾಡಲು ನಿರಾಕರಿಸಿತು. ನ್ಯಾಯಾಲಯದ ಗೌರವಕ್ಕೆ ಧಕ್ಕೆ ತರುವ ಮತ್ತು ನ್ಯಾಯಾಲಯದ ದಾರಿ ತಪ್ಪಿಸಲು ಭಟ್ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಯಿತು.ಆ ಸಮಯದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ವಿರುದ್ಧ ಹೇಳಿಕೆ ನೀಡಿದ ಸಂದರ್ಭದಲ್ಲಿ 2011 ರಲ್ಲಿ ಕಸ್ಟಡಿ ಸಾವಿನ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂಬ ಅಂಶವನ್ನು ಪರಿಗಣಿಸಲು ಗುಜರಾತ್ ಹೈಕೋರ್ಟ್ ವಿಫಲವಾಗಿದೆ ಎಂದು ಭಟ್ ಅವರು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ವಾದಿಸಿದ್ದಾರೆ. ಅವರು ಜೈಲಿನಿಂದ ಬಿಡುಗಡೆಯಾದ ನಂತರ ಸಂತ್ರಸ್ತ ಸಾವನ್ನಪ್ಪಿದ್ದಾರೆ ಮತ್ತು 300 ಸಾಕ್ಷಿಗಳಲ್ಲಿ ಕೇವಲ 32 ಮಂದಿಯನ್ನು ಮಾತ್ರ ಪಾಟಿ ಸವಾಲಿಗೆ ಒಳಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
1990 ರಲ್ಲಿ ಭಟ್ ಅವರು ಜಾಮ್ ನಗರ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ವೈಷ್ಣವಿ ಮತ್ತು ಇತರ 133 ಮಂದಿಯನ್ನು ಗಲಭೆ ಸಂಬಂಧ ವಶಕ್ಕೆ ಪಡೆಯಲಾಗಿತ್ತು.2015 ರಲ್ಲಿ ಅವರನ್ನು ಅವರ ಸೇವೆಗಳಿಂದ ವಜಾಗೊಳಿಸಲಾಯಿತು. ಭಟ್ ಅವರು ತಮ್ಮ ವಿರುದ್ಧದ ಪ್ರಕರಣವು "ರಾಜಕೀಯ ಸೇಡು" ಎಂದು ಆರೋಪಿಸಿದ್ದರು.ನ್ಯಾಯಮೂರ್ತಿ ಅಶೋಕ್ ಭೂಷಣ್, ಎಂ.ಆರ್.ಶಾ ಮತ್ತು ಆರ್ ಸುಭಾಷ್ ರೆಡ್ಡಿ ಅವರ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಜುಲೈ ಮೂರನೇ ವಾರದಲ್ಲಿ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ಹೇಳಿದೆ.