ರೋಟರಿ-ಇನ್ನರವಿಲ್ ಪದಗ್ರಹಣ ಸಮಾರಂಭ
ರಾಣೆಬೆನ್ನೂರ 30: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸುವ ಮೂಲಕ ರೋಟರಿ ಹಾಗೂ ಇನ್ನರ್ವೀಲ್ನಂತಹ ಸೇವಾ ಸಂಸ್ಥೆಗಳು ಜನಸೇವೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ವರ್ತಕರ ಸಂಘದ ಸಭಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ರೋಟರಿ ಕ್ಲಬ್ ಹಾಗೂ ಇನ್ನರ್ವೀಲ್ ಕ್ಲಬ್ 2025ಹಿ26್ಫೂ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಕ್ಕೆ ನಾವು ಪಡೆದಿರುವುದರಲ್ಲಿ ಒಂದು ಭಾಗವನ್ನು ಸೇವೆಗೆ ಮೀಸಲಿಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸೇವಾ ಸಂಸ್ಥೆಗಳು ನಿಸ್ವಾರ್ಥ ಸೇವೆಯ ಮೂಲಕ ಸಮಾಜದಲ್ಲಿ ಆತ್ಮತೃಪ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿವೆ ಎಂದು ಹೇಳಿದರು.
ನೂತನ ಅಧ್ಯಕ್ಷ ಡಾ. ಪ್ರವೀಣ್ ಎಂ. ಖನೂರ ಅಧಿಕಾರ ಸ್ವೀಕರಿಸಿ ಮಾತನಾಡಿ, ಹಿರಿಯರು ರೂಪಿಸಿದ ಸೇವಾ ಪರಂಪರೆಯನ್ನು ಮುಂದುವರಿಸುವುದರ ಜೊತೆಗೆ ಜನಸಾಮಾನ್ಯರಿಗೆ ಅನುಕೂಲವಾಗುವ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಸಂಕಲ್ಪ ವ್ಯಕ್ತಪಡಿಸಿದರು.
ರೋಟರಿ ಹಿರಿಯ ಸದಸ್ಯ ಎಸ್. ಜಯರಾಮನ್ ಮಾತನಾಡಿ, ಜಾತಿ, ಧರ್ಮ, ವರ್ಗಭೇದವಿಲ್ಲದೆ ಮಾನವಸೇವೆಯೇ ರೋಟರಿಯ ಮೂಲ ಉದ್ದೇಶವಾಗಿದ್ದು, ವಿಶ್ವದಾದ್ಯಂತ ಸಂಘಟನೆ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ ಎಂದರು.