ಮಾದರಿ ವಾಣಿಜ್ಯ ನಗರವನ್ನಾಗಿ ತಾಳಿಕೋಟೆ ಪಟ್ಟಣ ಅಭಿವೃದ್ಧಿ: ಶಾಸಕ ಎ.ಎಸ್.ಪಾಟೀಲ
ತಾಳಿಕೋಟೆ 03: ಪಟ್ಟಣದ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಹೆಚ್ಚುವರಿ ಅನುದಾನವನ್ನು ಮಂಜೂರಿಸಿಕೊಂಡು ಪಟ್ಟಣವನ್ನು ಮಾದರಿ ವಾಣಿಜ್ಯ ನಗರವನ್ನಾಗಿ ರೂಪಿಸಲಾಗುವದು ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಅವರು ಬುಧವಾರ ಪಟ್ಟಣದ ಬಸ್ ನಿಲ್ದಾಣದಿಂದ ವಿದ್ಯಾಭಾರತಿ ಶಾಲೆಯವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು.
ಪಟ್ಟಣದಲ್ಲಿ ವಾಸವಿ ಕಲ್ಯಾಣ ಮಂಟಪದಿಂದ ಹಿಡಿದು ಆಶ್ರಯ ಕಾಲನಿಯವರೆಗೆ ಬರುವ ಪ್ರಮುಖ ರಸ್ತೆಯಲ್ಲಿ ಎರಡು ಬದಿಯಲ್ಲಿ ಪುಟ್ಪಾತ್ ಸೇರಿದಂತೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಪಟ್ಟಣದ ಒಂದು ವಾಣಿಜ್ಯ ನಗರವಾಗಿದೆ. ಇಲ್ಲಿಗೆ ಸುತ್ತಮುತ್ತಲಿನ ಹಲವು ಗ್ರಾಮಗಳ ಜನ ವ್ಯಾಪಾರಕ್ಕೆ ಬರುತ್ತಾರೆ. ಪಟ್ಟಣದ ಸುಂದರವಾಗಿ ಕಾಣಬೇಕು. ವಾಣಿಜ್ಯ ನಗರವಾಗಿ ಮಾಡುವ ಕನಸು ಹೊತ್ತು ಕೆಲಸ ಮಾಡುತ್ತಿದ್ದೇನೆ. 10 ಕೋಟಿ ಅನುದಾನದಲ್ಲಿ ಕಾಮಗಾರಿಗಳು ನಡೆಯುತ್ತಿದೆ. ಹೆಚ್ಚುವರಿ 5 ಕೋಟಿ ಮಂಜೂರಾಗಿದೆ. ಇನ್ನು 5 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಟ್ಟಣದಲ್ಲಿ ಉದ್ಯಾನವನಗಳ ಅಬಿವೃದ್ಧಿಗೆ 25 ಕೋಟಿಗಳ ಕ್ರೀಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅದರಲ್ಲಿ 5 ಕೋಟಿ ಅನುದಾನಕ್ಕೆ ಒಪ್ಪಿಗೆ ಸಿಕ್ಕಿದ್ದು, 2.5 ಕೋಟಿ ಅನುದಾನವು ಸಹ ಬಿಡುಗಡೆ ಆಗಿದೆ. ಪಟ್ಟಣದ ಬಡವರಿಗಾಗಿ ಜಿಪ್ಲಸ್ ಮಾದರಿಯಲ್ಲಿ 300 ಮನೆಗಳನ್ನು ಕಟ್ಟಲು ಸರ್ಕಾರಿಂದ 30 ಕೋಟಿ ಮಂಜೂರು ಆಗಿದೆ. ಟೆಂಡರ್ ಕೂಡಾ ಆಗಿದ್ದು, ಶೀಘ್ರದಲ್ಲಿಯೇ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಮುಂದಿನ ಎರಡುವರೆ ವರ್ಷಗಳಲ್ಲಿ ಪಟ್ಟಣಕ್ಕೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸಿ ಮಾದರಿ ವಾಣಿಜ್ಯ ನಗರವನ್ನಾಗಿ ಮಾಡಲಾಗುವದು ಎಂದರು.
ಪುಟ್ಪಾತ್ ಅತಿಕ್ರಮಣಕಾರರಿಗೆ ಶಾಸಕರ ಸೂಚನೆ :- ಪಟ್ಟಣದಲ್ಲಿ ನಿರ್ಮಾಣವಾದ ನೂತನ ಪುಟ್ಪಾತ್ ಅತಿಕ್ರಮಣವನ್ನು ಮಾಡಿಕೊಂಡು ವ್ಯಾಪಾರ ಮಾಡುತ್ತಿರುವ ಅಂಗಡಿಕಾರರಿಗೆ ಸ್ವತಃ ಶಾಸಕರೇ ಪುಟ್ಪಾತ್ ಅತಿಕ್ರಮಣ ಮಾಡದಂತೆ ಸೂಚನೆ ನೀಡಿದರು.
ಜನರ ಅನಕೂಲಕ್ಕಾಗಿ ಮಾಡಿರುವ ಪುಟ್ಪಾತ್ ಅತಿಕ್ರಮಣ ಮಾಡಿದರೇ ಸಾರ್ವಜನಿಕರು ಹೇಗೆ ತಿರುಗಾಡಬೇಕು. ಪುಟ್ಪಾತ್ ಅತಿಕ್ರಮಣ ಮಾಡಿದರೆ ಜನರು ರಸ್ತೆಯಲ್ಲಿ ತಿರುಗಾಟ ನಡೆಸುತ್ತಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತದೆ. ಪುಟ್ಪಾತ್ ಅತಿಕ್ರಮಣ ಮಾಡಬೇಡಿ ಎಂದು ಮನವಿ ಮಾಡಿದರು. ಒಂದು ವೇಳೆ ಮಾಡಿದರೆ ಕಾನೂನು ಪ್ರಕಾರ ಕ್ರಮಕೈಕೊಳ್ಳಲಾಗುವದು ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ ನಿರ್ದೇಶಕ ಸೋಮನಗೌಡ ಬಿರಾದಾರ, ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಅಣ್ಣಪ್ಪ ಜಗತಾಪ, ಮುತ್ತಪ್ಪ ಚಮಲಾಪೂರ, ಮುದಕಪ್ಪ ಬಡಿಗೇರ, ರಾಜುಗೌಡ ಗುಂಡಕನಾಳ, ಶಿವಶಂಕರ ಹಿರೇಮಠ, ಕಾಶಿನಾತ ಅರಳಿಚಂಡಿ, ಕಾಸಿನಾಥ ಮಂಬ್ರಕರ, ರವಿ ಕಟ್ಟಿಮನಿ, ಈಶ್ವರ ಹೂಗಾರ ಸೇರಿದಂತೆ ಇತರರು ಇದ್ದರು.