ರಕ್ತದಾನದಿಂದ ನವಚೈತನ್ಯಪ: ಸಿದ್ಧರಾಜು ಚಂದ್ರಪ್ಪ
ಬಳ್ಳಾರಿ,26: ರಕ್ತದಾನಕ್ಕಿಂತ ದೊಡ್ಡ ದಾನ ಮತ್ತೊಂದಿಲ್ಲ. ಮಾನವಿಯತೆಗಾಗಿ ರಕ್ತದಾನ ಮಾಡಿದಲ್ಲಿ ನಮ್ಮಲ್ಲಿ ನವಚೈತನ್ಯ ಹುಟ್ಟುತ್ತದೆ ಎಂದು ಬಳ್ಳಾರಿ ಲೋಕಾಯುಕ್ತ ಎಸ್. ಪಿ. ಸಿದ್ಧರಾಜು ಚಂದ್ರಪ್ಪ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 15ನೇ ಸಂಸ್ಥಾಪನಾ ದಿನ-2024ರ ಪೂರ್ವ ದಿನದಂದು ಬಳ್ಳಾರಿ ಯುವ ರೆಡ್ ಕ್ರಾಸ್ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ವಿವಿಯ ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಿದ್ಯಾರ್ಥಿ ಕಲ್ಯಾಣ ಘಟಕ ವತಿಯಿಂದ ಆಯೋಜಿಸಲಾಗಿದ್ದ ‘ಸ್ವಯಂ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣೆ’ ಕಾರ್ಯಕ್ರಮವನ್ನು ರೆಡ್ಕ್ರಾಸ್ ಜಾಕೆಟ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಕ್ತದಾನ ಮಹಾದಾನ, ನಮ್ಮ ರಕ್ತದಾನವು ಒಬ್ಬರ ಜೀವವನ್ನು ಉಳಿಸುತ್ತದೆ. ಒಬ್ಬ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ಯುವ ಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಎಂದು ಹೇಳಿದರು.
ವಿಮ್ಸ್ ನಿರ್ದೇಶಕರಾದ ಡಾ. ಗಂಗಾಧರಗೌಡ ಮಾತನಾಡಿ, ಇಂದಿನ ದಿನಗಳಲ್ಲಿ ರಕ್ತದ ಅಗತ್ಯತೆ ಹೆಚ್ಚಾಗಿದ್ದು, ಶಸ್ತ್ರ ಚಿಕಿತ್ಸೆ, ಮಹಿಳೆ ಹಾಗೂ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇರುವ ರೋಗಿಗಳಿಗೆ ಅವಶ್ಯಕವಾಗಿದೆ ಎಂದರು.
ವಿವಿಯ ಕುಲಸಚಿವರಾದ ರುದ್ರೇಶ್ ಎಸ್. ಎನ್. ಮಾತನಾಡಿ, ಕಾಲಕಾಲಕ್ಕೆ ರಕ್ತದಾನ ಮಾಡುವುದರಿಂದ ಆರೋಗ್ಯ ಸಮತೋಲನವಾಗಿರಲು ಸಹಾಯಕವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿಗಳಾದ ಪ್ರೊ ತಿ್ೇರುದ್ರ್ಪ ಜೆ. ಮಾತನಾಡಿ, ರಕ್ತವು ಮನುಷ್ಯರ ದೇಹದಲ್ಲಿ ಉತ್ಪತ್ತಿಯಾಗುವ ಸಂಪನ್ಮೂಲವಾಗಿದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಅದಕ್ಕಾಗಿ ರಕ್ತದಾನ ಮಹಾದಾನ ಎಂದು ಕರೆಯುತ್ತೇವೆ ಎಂದರು.
ವಿವಿಯ ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಸೇರಿದಂತೆ 150ಕ್ಕೂ ಹೆಚ್ಚು ರಕ್ತದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥರಾದ ಡಾ. ಶಶಿಧರ ಕೆಲ್ಲೂರ ನಿರೂಪಿಸಿದರು. ವಿವಿಯ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ರಾಜೇಂದ್ರ್ರಸಾದ್ ಅತಿಥಿಗಳನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಮೇಶ್ ಓ ಓಲೇಕಾರ್, ಬಳ್ಳಾರಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಸರೆಡ್ಡಿ, ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಮ್. ಎ. ಶಕೀಬ್, ವಿದ್ಯಾರ್ಥಿ ಕಲ್ಯಾಣ ಘಟಕದ ನಿರ್ದೇಶಕರಾದ ಡಾ. ಶಶಿಕಾಂತ ಮಜಗಿ, ರಾಷ್ಟ್ರೀಯ ಸೇವಾಯೋಜನೆಯ ಸಂಯೋಜಕರಾದ ಡಾ. ಕುಮಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಯ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.