ಉತ್ತರ ಕನ್ನಡದಲ್ಲಿ ಮಲೇರಿಯಾ ನಿರ್ಮೂಲನೆಗೆ ಪರೀಶೀಲನೆ
ಕಾರವಾರ 16: ಉತ್ತರ ಕನ್ನಡ ಜಿಲ್ಲೆಯಲ್ಲಿ 2014ರಿಂದ ಯಾವುದೇ ಸ್ಥಳೀಯ ಮಲೇರಿಯಾ ಪ್ರಕರಣಗಳು ವರದಿಯಾಗದ ಹಿನ್ನೆಲೆಯಲ್ಲಿ, ಮಲೇರಿಯಾ ನಿರ್ಮೂಲನಾ ಪ್ರಮಾಣೀಕರಣದ ಭಾಗವಾಗಿ ರಾಷ್ಟ್ರೀಯ ಮಲೇರಿಯಾ ನಿರ್ಮೂಲನಾ ಮೌಲ್ಯಮಾಪನ ತಂಡವು ಮೂರು ದಿನಗಳ ಜಿಲ್ಲಾ ಭೇಟಿಯನ್ನು ನಡೆಸಿತು.
ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ. ತಾರಕ ಸೌರಭ್, ದಾದ್ರಾ ಮತ್ತು ನಗರ ಹವೇಲಿ ದಮನ್ ಮತ್ತು ದಿಯು ರಾಜ್ಯ ಕಾರ್ಯಕ್ರಮ ಅಧಿಕಾರಿ ಡಾ. ಗಣೇಶ್ ಕಮಲಾಕರ ವರ್ಣೇಕರ್, ಆಂಧ್ರ್ರದೇಶದ ಜಿಲ್ಲಾ ವೈದ್ಯಾಧಿಕಾರಿ ಡಾ. ಕ್ರಾಂತಿಕುಮಾರ್ ಹಾಗೂ ಪುದುಚೇರಿಯ ವೈದ್ಯಾಧಿಕಾರಿ ಡಾ. ಐಶ್ವರ್ಯ ಪೆರುಮಾಳ್ ತಂಡದಲ್ಲಿದ್ದರು.
ತಂಡವು ಕಾರವಾರ ವೈದ್ಯಕೀಯ ಕಾಲೇಜು, ಭಾರತೀಯ ನೌಕಾ ಸೇವೆಯ ಪತಂಜಲಿ, ಬಂದರು ಪ್ರದೇಶ, ಖಾಸಗಿ ಆಸ್ಪತ್ರೆ ಹಾಗೂ ಪ್ರಯೋಗಾಲಯ ಸೇರಿದಂತೆ ವಿವಿಧ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿತು. ಕಾರವಾರ, ದಿವಗಿ, ಅಂಕೋಲಾ ಹಾಗೂ ಶಿರಾಲಿಯ ಆರೋಗ್ಯ ಕೇಂದ್ರಗಳಲ್ಲಿಯೂ ಪರೀಶೀಲನೆ ನಡೆಸಲಾಯಿತು.
ದಿವಗಿ ಗ್ರಾಮದ ಕೊನೆಯ ಸ್ಥಳೀಯ ಪ್ರಕರಣದ ಪ್ರದೇಶಕ್ಕೆ ಭೇಟಿ ನೀಡಿ, ಗ್ರಾಮಗಳಲ್ಲಿ ನಡೆಯುತ್ತಿರುವ ವೆಕ್ಟರ್ ನಿಯಂತ್ರಣ ಕ್ರಮಗಳನ್ನು ಪರೀಶೀಲಿಸಿದ ತಂಡವು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿತು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಜಯ್ ದೊಡ್ಡಮನಿ ಹಾಗೂ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ರಮೇಶ್ ರಾವ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮಲೇರಿಯಾ ನಿಯಂತ್ರಣ ಚಟುವಟಿಕೆಗಳನ್ನು ತಂಡ ಶ್ಲಾಘಿಸಿತು. ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ರಕ್ಷಣಾ ಅಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ವೈದ್ಯಕೀಯ ಅಧಿಕಾರಿಗಳ ಕೊಡುಗೆಯನ್ನೂ ಪ್ರಶಂಸಿಸಲಾಯಿತು.