ಹಿರಿಯರನ್ನು ಗೌರವಿಸಿ: ಮಹೇಶ್ವರ ಸ್ವಾಮೀಜಿ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ.ಡಿ.14 : ಜನ್ಮ ನಿಡಿದ ತಂದೆ ತಾಯಿ ಮಕ್ಕಳ ಲಾಲನೆ ಪಾಲನೆಯಲ್ಲಿ ತಮ್ಮ ಸಂಪೂರ್ಣ ಜೀವನವನ್ನೆ ಸವೆಸಿರುತ್ತಾರೆ, ಜನ್ಮದಾತರಾದ ತಂದೆ ತಾಯಿ, ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಅತ್ತೆಮಾವರನ್ನು ಸೇರಿದಂತೆ ಹಿರಿಯರಿಗೆ ಗೌರವದಿಂದ ಕಾಣಬೇಕು, ವೃದ್ಧಾಪ್ಯಾವಸ್ಥೆಯಲ್ಲಿನ ಹಿರಿಯರಿಗೆ ಲಾಲನೆಪಾಲನೆ ಮಾಡಬೇಕು ಎಂದು ನಂದಿಪುರ ಕ್ಷೇತ್ರದ ಮಹೇಶ್ವರ ಸ್ವಾಮೀಜಿ ಕರೆ ನೀಡಿದರು.
ಪಟ್ಟಣದ ಕಾತ್ಯಾಯಿನಿಮರಡಿ ರಸ್ತೆಯಲ್ಲಿರುವ ಶ್ರೀಅನ್ನಪೂರ್ಣೇಶ್ವರಿ ಮಠದಲ್ಲಿ, ಹಾಲಸ್ವಾಮಿ ಮಠದ ಹಾಲಸಿದ್ಧೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ, ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನೂತನ ದಂಪತಿಗಳು ಮುಂದಿನ ಜೀವನದಲ್ಲಿ ಹಾಲುಜೇನು ಬೆರೆತಂತೆ ಇರಬೇಕು. ತಮ್ಮ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಸಮಾಜಕ್ಕೆ ದೇಶಭಕ್ತರಾಗುವ ಕೊಡುಗೆಯಾಗಿ ನೀಡಬೇಕು ಎಂದರು.
ಹಂಪಸಾಗರ ಉಘಾಮಠದ ಶಿವಲಿಂಗ ರುದ್ರಮುನಿ ಸ್ವಾಮೀಜಿ ಮಾತನಾಡಿ, ದಂಪತಿಗಳು ಪರಸ್ಪರ ನಂಬಿಕೆಯೊಂದಿಗೆ ಜೀವನ ನಡೆಸಿದಲ್ಲಿ ಬದುಕು ಸ್ವಾರಸ್ಯವಾಗಿರುತ್ತದೆ. ಮಾನವ ಜೀವನಕ್ಕೆ ಪ್ರಕೃತಿ ಉಚಿತವಾಗಿ ಏನೆಲ್ಲ ನೀಡುತ್ತಿದೆ. ಆ ಪ್ರಕೃತಿಯನ್ನು ಕಾಪಾಡಬೇಕು ಎಂದರಲ್ಲದೆ, ಹಾಲಸ್ವಾಮಿ ಮಠದ ಲಿಂಗಕ್ಯ ಹಾಲಶಂಕರ ಸ್ವಾಮೀಜಿ ಕಂಡ ಕನಸು, ಯುವಕರಾದ ಹಾಲಸಿದ್ದೇಶ್ವರ ಸ್ವಾಮೀಜಿಗಳಿಂದ ಮುಂದೆ ನನಸಾಗಲಿ ಎಂದು ಆಶಿಸಿದರು.
ನೇತೃತ್ವ ವಹಿಸಿದ್ದ ಹಾಲಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಭಕ್ತರಿದ್ದಲ್ಲಿ ಮಠ, ಮಠ ಇರುವುದೇ ಸಮಾಜ ಸೇವೆಗೆ. ಇದು ನಮ್ಮ ಮಠ ಎನ್ನುವುದಕ್ಕಿಂತ ನಿಮ್ಮೆಲ್ಲರ ಸ್ವತ್ತಿನ ಮಠವಾಗಿದೆ ಇದರಿಂದ ಉಪಯೋಗ ಸಮಾನಕ್ಕೆ ದೊರೆಯಲಿ. ಅದಕ್ಕಾಗಿ ಹಿರಿಯ ಎಲ್ಲಾ ಮಠಾಧೀಶ್ವರರ ಆಶೀರ್ವಾದ ಮತ್ತು ಭಕ್ತರ ಸಹಕಾರವಿರಲಿ ಎಂದರು.
ಇದೇ ವೇಳೆ 10ಜೋಡಿಗಳಿಗೆ ಕಂಕಣ ಭಾಗ್ಯ ಕೂಡಿಬಂದಿತು. ಸಮಾಜ ಸೇವಕ ಕುರಿ ಶಿವಮೂರ್ತಿ ದಂಪತಿಗಳಿಗೆ ವಸ್ತ್ರ, ಮಾಂಗಲ್ಯ ಇತರೆ ವಸ್ತುಗಳನ್ನು ಕಾಣಿಕೆಯಾಗಿ ನೀಡಿದರು. ಮಠದ ಭೂ ದಾನಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹನಸಿ ಮಠದ ಶಂಕರ ಸ್ವಾಮೀಜಿ, ಉತ್ತಂಗಿ ಮಠದ ಸೋಮಶಂಕರ ಸ್ವಾಮೀಜಿ, ರಾಂಪುರದ ಹಾಲ ಶಿವಕುಮಾರ್ ಸ್ವಾಮೀಜಿ, ಮೊಣಕೂರ್ ಮಲ್ಲಿಕಾರ್ಜುನ ಸ್ವಾಮೀಜಿ, ಗದ್ದಿಕೆರೆಯ ಚರಂತೇಶ್ವರ ಸ್ವಾಮೀಜಿ, ಹೆಬ್ಬಾಳದ ಶಿವಪ್ರಕಾಶ್ ಸ್ವಾಮೀಜಿ, ಸಮಾಜ ಸೇವಕ ಕುರಿ ಶಿವಮೂರ್ತಿ, ಹಾಲಸ್ವಾಮಿ ಮಠದ ಟ್ರಸ್ಟ್ನ ಪದಾಧಿಕಾರಿಗಳು ಸೇರಿ ಮತ್ತಿತರರು ಇದ್ದರು.
ಸಂಗೀತ ಶಿಕ್ಷಕಿ ಶಾರದ ಮಂಜುನಾಥ ಹಾಗೂ ರೇವಣಸಿದ್ಧಚಾರಿ ಪ್ರಾರ್ಥಿಸಿದರು. ಬ್ಯಾಲಾಳ್ ಕರಿಬಸವನಗೌಡ ನಿರ್ವಹಿಸಿದರು.