ಕೆಂಗೇರಿಮಡ್ಡಿಯ ನಿವಾಸಿಗಳು ನೀರಿಗಾಗಿ ಮಹಿಳೆಯರು ಪರದಾಟ,ಕುಟುಂಬ ನಿರ್ವಹಣೆಯ ಆತಂಕ.
ಮಹಾಲಿಂಗಪುರ 30: ಸ್ಥಳೀಯ ಕೆಂಗೇರಿಮಡ್ಡಿ ಬಡಾವಣೆಯ 14 ಮತ್ತು 15 ನೇ ವಾರ್ಡಿನಲ್ಲಿ ಕುಡಿಯುವ ನೀರು ಮತ್ತು ನಿತ್ಯ ಬಳಕೆಯ ನೀರಿನ ಅಭಾವ ಉಂಟಾಗಿದ್ದು ಬಡ ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಕೆಲಸ ಕಾರ್ಯ ಬಿಟ್ಟು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ.
ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಈ ಬಡಾವಣೆಯಲ್ಲಿ ದುಡಿದು ತಿನ್ನುವ ಬಡವರೇ ವಾಸಿಸುತ್ತಿದ್ದು ನೀರಿಗಾಗಿ ಪರದಾಡಬೇಕಾದ ಅನಿವಾರ್ಯತೆ ಬಂದೊದಗಿದ್ದು, ಕೂಲಿ ಕೆಲಸಕ್ಕೆ ಹೋಗಿ ದುಡಿದು ಇಡೀ ಕುಟುಂಬದ ಹೊಟ್ಟೆ ತುಂಬಿಸುತ್ತಿದ್ದ ಮಹಿಳೆಯರು ತಮ್ಮ ದುಡಿಮೆಯನ್ನು ಬದಿಗಿಟ್ಟು ನೀರಿಗಾಗಿ ಸುತ್ತಾಡುವ ಪರಿಸ್ಥಿತಿ ಬಂದಿದೆ. ದಿನದ ದುಡಿಮೆಯಿಲ್ಲದೇ ಕುಟುಂಬ ನಿರ್ವಹಣೆ ಹೇಗೆಂಬ ಆತಂಕದಲ್ಲಿಯೇ ಅವರು ನೀರಿಗಾಗಿ ಓಡಾಡಬೇಕಾಗಿದೆ. ವೃದ್ಧೆಯರೂ ಸಹ ಬಿರು ಬಿಸಿಲಿನಲ್ಲಿ ಕೊಡ ಹಿಡಿದು ನೀರಿಗಾಗಿ ಓಡಾಡುವಂತಾಗಿದೆ.
ಮಂಗಳವಾರ ಬೆಳಗ್ಗೆ ಪುರಸಭಾ ಸದಸ್ಯ ಶೇಖರ ಅಂಗಡಿ ಪುರಸಭಾ ಮುಖ್ಯ ಅಧಿಕಾರಿಯವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಟ್ಯಾಂಕರ್ ಮೂಲಕ ನೀರು ಒದಗಿಸುವ ಭರವಸೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ,ಮುಖಂಡರಾದ ಮಹಾಲಿಂಗ ಶಿವನಗಿ,ಮುತ್ತಪ್ಪ ಕುಂದ್ರಾಳ ಇತರರಿದ್ದರು.
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು ಮಹಾಲಿಂಗಪುರ ಪಟ್ಟಣದಲ್ಲಿಯೂ ಸಹ ಕೆರೆ ಸಂಪೂರ್ಣ ಬತ್ತಿ ಹೋಗಿದ್ದು ಅಂತರ್ಜಲ ಕುಸಿತದಿಂದಾಗಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ, ಇನ್ನು ಜಾನುವಾರುಗಳು ಮತ್ತು ಪ್ರಾಣಿಗಳು ಕುಡಿಯುವ ನೀರಿಲ್ಲದೇ ಪರಿತಪಿಸುತ್ತಿವೆ. ಹಾಗಾಗಿ ಸರ್ಕಾರ ಮಹಾಲಿಂಗಪುರ ಪಟ್ಟಣವನ್ನು ಕೂಡಲೇ ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು :
ಶೇಖರ ಅಂಗಡಿ, ಪುರಸಭಾ ಸದಸ್ಯ.