ಶೀಘ್ರವಾಗಿ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂದು ಸರ್ಕಾರಕ್ಕೆ ಮನವಿ
ಮಹಾಲಿಂಗಪುರ 24: ಕೃಷಿ ಮಾರುಕಟ್ಟೆಯಲ್ಲಿ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುವುದಲ್ಲದೆ, ವ್ಯಾಪಾರಸ್ಥರು, ಕೂಲಿ ಕಾರ್ಮಿಕರು, ಕಾರಕೂನರ ಬದುಕು ಕೂಡ ಸುಗಮವಾಗುತ್ತದೆ.ಆದ್ದರಿಂದ ಶೀಘ್ರವಾಗಿ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂದು ಎಪಿಎಂಸಿ ದಲಾಲ ವರ್ತಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ನೇತೃತ್ವದ ನಿಯೋಗ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ಸರ್ಕಾರಕ್ಕೆ ಒತ್ತಾಯಿಸುವ ಮನವಿ ಸಲ್ಲಿಸಿತು.
ಬುಧವಾರ ಬಿಜಾಪುರದ ಸಚಿವ ಶಿವಾನಂದ ಪಾಟೀಲ ಅವರ ನಿವಾಸದಲ್ಲಿ ಮನವಿ ಸಲ್ಲಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಕೃಷಿ ಮಾರುಕಟ್ಟೆ ಕಾನೂನುಗಳನ್ನು ತರುವ ಮುಂಚೆ ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ 700 ಕೋಟಿಕ್ಕಿಂತಲೂ ಅಧಿಕ ಸೆಸ್ ಜಮಾ ಆಗಿ, ರಾಜ್ಯ ಕೃಷಿ ಮಾರುಕಟ್ಟೆಗಳ ಅಭಿವೃದ್ಧಿ ಕೆಲಸ/ ಕಾರ್ಯಗಳು ಸುಗಮವಾಗಿ ನಡೆಯುತ್ತಿದ್ದವು.
ಈಗ ಕೇವಲ 150ಕೋಟಿಗಳಿಗಿಂತಲೂ ಕಡಿಮೆ ಸೆಸ್ ಜಮಾ ಆಗುತ್ತಿರುವುದರಿಂದ ರಾಜ್ಯದಲ್ಲಿಯೇ ಹೆಚ್ಚಿನ ಕರ ತುಂಬುವ ಎರಡನೇಯ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದ ಮಹಾಲಿಂಗಪುರ ಸೇರಿದಂತೆ, ರಾಜ್ಯದ 162 ಮಾರುಕಟ್ಟೆಗಳಲ್ಲಿ ಅಭಿವೃದ್ಧಿ ಕೆಲಸಗಳು ಸಹ ಸ್ಥಗಿತಗೊಂಡು, ವಹಿವಾಟು ಇಲ್ಲದೆ ಅಂಗಡಿಗಳು, ಉಗ್ರಾಣಗಳು, ಇತರೆ ಕಟ್ಟಡಗಳು ಹಾಳಾಗಿ ವಾತಾವರಣವೆಲ್ಲ ಬಿಕೋ ಎನ್ನುತ್ತಿದೆ. ಇದರಿಂದ ಸ್ಥಳೀಯ ಹಮಾಲರು, ಕಾರಕೂನರು ಮತ್ತು ವ್ಯಾಪಾರಿಗಳು ಆರ್ಥಿಕ ತೊಂದರೆಗೀಡಾಗಿದ್ದಲ್ಲದೆ ಅವರನ್ನು ಭವಿಷ್ಯದ ಬೆಲ್ಲದ ವ್ಯಾಪಾರ ಚಿಂತೆ ಸಹ ಕಾಡುತ್ತಿದೆ.
ರೈತ ಸಮುದಾಯಕ್ಕೂ ಸಹ ಈ ಕಾನೂನುಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು.ಹೇಗೆಂದರೆ ರೈತ ಮಾರುಕಟ್ಟೆಗೆ ಬೆಲ್ಲ ತಂದಾಗ ಹಲವಾರು ಜನ ಖರಿದಿದಾರರಿಂದ ಪೈಪೋಟಿ ಏರ್ಪಟಟು ಉತ್ತಮ ಬೆಲೆ ಸಿಗುತ್ತದೆ. ನೇರ ಹೊರಗಿನ ವ್ಯಾಪಾರದಿಂದ ರೈತನಿಗೆ ಮಾರುಕಟ್ಟೆಯ ನಿಜ ದರದ ಮಾಹಿತಿ ಕೊರತೆಯಿಂದ ಕಡಿಮೆ ಬೆಲೆಗೆ ಮಾರಾಟ ಮಾಡಿ ರೈತ ನಷ್ಟಕ್ಕೊಳಗಾಗುತ್ತಾನೆ. ಈ ಕಾನೂನುಗಳು ಎಲ್ಲ ವರ್ಗದ ಜನರಿಗೆ ಮಾರಕವಾಗಿವೆ ಇವುಗಳನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಕಳೆದ ವರ್ಷ ದೇಶದ ರೈತರ ಪ್ರತಿಭಟನೆ ಎದುರಿಸಿ ಮೂರು ಕೃಷಿ ಮಾರುಕಟ್ಟೆ ಕಾನೂನುಗಳನ್ನು ರದ್ದುಗೊಳಿಸಿದ್ದರೂ, ದೇಶದ ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿರುವ ಕಾರಣದಿಂದ ಕರ್ನಾಟಕ ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಕಾಯ್ದೆ ವಿರುದ್ಧ ವಿಧಾನಸಭೆಯಲ್ಲಿ ಜಯ ದೊರಕಿದ್ದರೂ ವಿಧಾನ ಪರಿಷತ್ ನಲ್ಲಿ ಹಿನ್ನೆಡೆಯಾಗಿ, ಕೃಷಿ ಕಾಯ್ದೆಗಳು ಹಾಗೆ ಉಳಿದುಕ್ಕೊಂಡು ಬಂದಿರುವುದನ್ನು ನಾವಿಲ್ಲಿ ಸ್ಮರಿಸಿಕ್ಕೊಳ್ಳಬಹುದು.
ಸ್ಥಳೀಯ ಕೃಷಿ ಮಾರುಕಟ್ಟೆ ದಲಾಲ್ ವರ್ತಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ, ಕಿರಾಣಿ ಸ್ಟೋರ್ಸ್ ಮಾಲೀಕರ ಸಂಘದ ಅಧ್ಯಕ್ಷ ಅಶೋಕ ಅಂಗಡಿ, ಕಾರ್ಯದರ್ಶಿ ಶ್ರೀಶೈಲ ನುಚ್ಚಿ, ಕಲ್ಲಪ್ಪಾ ತೇಲಿ. ಸಂಗಪ್ಪ ಲೋನಿ, ವಿನಯ ಚಮಕೇರಿ, ಸುನಿಲ್ ಕಿರಗಟಗಿ, ವಿಜಯಕುಮಾರ ಬಾಡನವರ, ಬಸವರಾಜ ಬಟಕುರ್ಕಿ, ಬಸವರಾಜ ನಿಂಬರಗಿ ಮುಂತಾದವರಿದ್ದರು.