ಹಗರಿಬೊಮ್ಮನಹಳ್ಳಿ

ಪದವಿ ಕಾಲೇಜು ಪ್ರಾರಂಭಿಸುವಂತೆ ಜಂಟಿ ನಿರ್ದೇಶಕರಿಗೆ ಮನವಿ

ಪದವಿ ಕಾಲೇಜು ಪ್ರಾರಂಭಿಸುವಂತೆ ಜಂಟಿ ನಿರ್ದೇಶಕರಿಗೆ ಮನವಿ


ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 09: ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಪದವಿ ಕಾಲೇಜು ಆರಂಭಿಸುವಂತೆ ಗ್ರಾಮದ ಕಾಲೇಜು ಹೋರಾಟ ಸಮಿತಿಯ ನಿಯೋಗವು ಕಲಬುರಗಿಯ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಸಂಜಯ ಕುಮಾರ ಪಟ್ನಾಯಕ ಅವರಿಗೆ ಮನವಿ ಸಲ್ಲಿಸಿದರು. 

ಹೋರಾಟ ಸಮಿತಿಯ ಸಂಚಾಲಕ ಹಾಗೂ ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿ ತಂಬ್ರಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ವಿದ್ಯಾರ್ಥಿಗಳಿಗೆ ಪದವಿ ಕಾಲೇಜು ಅವಶ್ಯಕವಾಗಿ ಬೇಕಿದೆ, ತಾಲೂಕು ಕೇಂದ್ರಗಳಲ್ಲಿನ ಕಾಲೇಜಿಗೆ ಅಲೆದಾಡದ ಪರಿಸ್ಥಿತಿಯು ಎದುರಾಗಿದ್ದು ಕೆಲವರು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದುಂಟು ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣಕ್ಕೆ ಪೂರಕ ಎನ್ನುವಂತಹ ಮಾತುಗಳು ಎಲ್ಲಿ ಬರುತ್ತವೆ, ಸದ್ಯದ ನಗರದ ಪದವಿ ಕಾಲೇಜಿನಲ್ಲಿ ಎರೆಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಾಲಾತಿ ಪಡೆದಿದ್ದು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಎಟುಕದಂತಾಗಿದೆ, ಈ ಸಂಬಂಧ ವಿಜಯನಗರ ಜಿಲ್ಲೆಗೆ ಪಾದಯಾತ್ರೆ ಮಾಡುವುದರ ಜೊತೆ ಹಲವು ಬಾರಿ ಮನವಿಗಳನ್ನು ನೀಡಲಾಗಿದೆ ಇದಕ್ಕೆ ಸ್ಪಂದಿಸದೇ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಶೀಘ್ರವೇ ಈ ಭಾಗದ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಪದವಿ ಕಾಲೇಜು ಸ್ಥಾಪನೆಗೆ ಮುಂದಾಗಬೇಕಿದೆ ಎಂದರು. 

ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಸಂಜಯ ಕುಮಾರ ಪಟ್ನಾಯಕ ಮನವಿ ಸ್ವೀಕರಿಸಿ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಪದವಿ ವ್ಯಾಸಂಗಕ್ಕೆ ಕಾಲೇಜು ಆರಂಭಿಸುವಂತೆ ಮನವಿ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ, ತಂಬ್ರಹಳ್ಳಿ ಗ್ರಾಮದಲ್ಲಿ ಪದವಿ ಕಾಲೇಜು ಆರಂಭಿಸುವಂತೆ ಸರಕಾರಕ್ಕೆ ವರದಿಯನ್ನು ನೀಡುವ ಭರವಸೆಯನ್ನು ನೀಡಿದರು. 

ಈ ಸಂದರ್ಭದಲ್ಲಿ ಪದವಿ ಕಾಲೇಜು ಹೋರಾಟ ಸಮಿತಿಯ ಸದಸ್ಯರಾದ ದೇವಿಪ್ರಸಾದ್, ಸುರೇಶ್ ಯಳಕಪ್ಪನವರ್, ಗೌರಜ್ಜನವರ ಗೀರೀಶ್, ಸುರೇಶ್ ಪಟ್ಟಣಶೆಟ್ಟಿ, ಮಂಜುನಾಥ್ ಪಾಟೀಲ್, ಶಿವಪ್ರಸಾದ್ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ