ಮಡಿವಾಳ ಜನಾಂಗವನ್ನು ಎಸ್ ಸಿ/ಎಸ್ ಟಿಗೆ ಸೇರ್ಪಡೆಗೊಳಿಸುವಂತೆ ಆಗ್ರಹ
ಬೆಂಗಳೂರು,ಆ 11 ರಾಜ್ಯದಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಮಡಿವಾಳ ಸಮುದಾಯ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದ್ದರಿಂದ ಸರ್ಕಾರ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರ್ಪಡೆಗೊಳಿಸಬೇಕೆಂದು ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ರವಿ ಡಾ ರವಿ ಕುಮಾರ್ ಆಗ್ರಹಿಸಿದ್ದಾರೆ. ರಾಜಾಜಿ ನಗರದ ರಾಜ್ಕುಮಾರ್ ಕಲಾಕ್ಷೇತ್ರದಲ್ಲಿ ಇಂದು ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಮಡಿವಾಳ ಮಾಚಿದೇವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮಡಿವಾಳ ಸಮುದಾಯದ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿರುವ ಅನ್ನಪೂರ್ಣಮ್ಮ ಅವರ ವರದಿಯನ್ನು ಸರ್ಕಾರ ಬಿಡುಗಡೆಗೊಳಿಸಬೇಕು.ಅಲ್ಲಿಯವರೆಗೂ ಈ ಸಮುದಾಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿರಲಿಲ್ಲ.ಈ ವರದಿಯನ್ನು ಜಾರಿಗೆ ತರಲು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಪ್ರಯತ್ನಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ವರದಿಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ಈ ಸಂಬಂಧ ಎಲ್ಲರೂ ಸಂಘಟಿತ ಹೋರಾಟ ನಡೆಸಿ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಸೋಣ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮಡಿವಾಳ ಜನಾಂಗದ ಕುಲಕಸುಬಾದ ಉಟ್ಟು ಬಿಟ್ಟ, ಹೊಲಸು ಸೂತಕ ಬಟ್ಟೆಗಳನ್ನು ಯಾವುದೇ ಮೈಲಿಗೆಗೆ ಅಂಜದೇ ತಮ್ಮ ತೆಲೆಯ ಮೇಲೆ ಹೊತ್ತು ತಂದು ಕೆರೆ ಅಥವಾ ಬಾವಿಗಳಲ್ಲಿ ಸ್ವಚ್ಛಗೊಳಿಸುವ ಕಾಯಕವನ್ನು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮುಂದುವರೆದಿದೆ.ಇಂತಹ ಜನಾಂಗಕ್ಕೆ ಸರ್ಕಾರದಿಂದ ಮೀಸಲಾತಿ, ಸೌಲಭ್ಯಗಳ ಅಗತ್ಯವಿದೆ. ಆದ್ದರಿಂದ ಅನ್ನಪೂರ್ಣ ವರದಿಯ ಆಶಯದಂತೆ ಪರಿಶಿಷ್ಟ ಜಾತಿ, ಪಂಗಡ ಪ್ರವರ್ಗಕ್ಕೆ ಸೇರ್ಪಡೆಗೊಳಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು. ಮಾಚಿದೇವ ಪ್ರಶಸ್ತಿ ಸ್ವೀಕರಿಸಿ ಸಾಲುಮರದ ತಿಮ್ಮಕ್ಕ ಮಾತನಾಡಿ, ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಈ ಬಾರಿ ಕೃಷಿಕರಿಗೆ ವರುಣ ದೇವ ಕರುಣಿಸಿದ್ದಾನೆ. ಎಲ್ಲರಿಗೂ ಸುಖ ಶಾಂತಿ ಸಿಗಲಿ ಎಂದು ಶುಭ ಹಾರೈಸಿದರು. ದೇವನಹಳ್ಳಿಯ ಸಮಾಜ ಸೇವಕ ಅಪ್ಪಣ್ಣ, ಕೆ.ಆರ್. ಪುರಂ ಡೋಬಿಘಾಟ್ ಅಧ್ಯಕ್ಷ ಕೃಷ್ಣಪ್ಪ, ರಂಗಭೂಮಿ ಕಲಾವಿದ ಕೆ.ಪಿ, ಅಶ್ವಥ್ ನಾರಯಣ್, ಜಾನಪದ ಕಂಸಾಳೆ ಕಲಾವಿದ ಎಂ.ಲಿಂಗಯ್ಯ ಅವರಿಗೆ ಈ ವರ್ಷದ ಮಡಿವಾಳ ಮಾಚಿದೇವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಆರ್. ವೆಂಕಟರಮಣ, ಕಾಂಗ್ರೆಸ್ ಮುಖಂಡ ಡಾ.ಎಂ.ರಾಜು ತಲ್ಲೂರು, ರಾಜ್ಯ ಮಡಿವಾಳ ಸಂಘದ ಕಾರ್ಯಾಧ್ಯಕ್ಷ ಬಿ.ರಂಗಸ್ವಾಮಯ್ಯ, ಬಿಜೆಪಿ ಸಹ ವಕ್ತಾರ ರಘು ಕೌಟಿಲ್ಯ, ಸಂಘದ ಪ್ರಧಾನ ಕಾರ್ಯದರ್ಶಿ ವಿ.ದೀಪಕ್ ಮತ್ತಿತರಿದ್ದರು.