ಹಗರಿಬೊಮ್ಮನಹಳ್ಳಿ

ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನ, ಕೋವಿಡ್ ಪ್ಯಾಕೇಜ್ ನೀಡುವಂತೆ ಮನವಿ

ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನ, ಕೋವಿಡ್ ಪ್ಯಾಕೇಜ್ ನೀಡುವಂತೆ ಮನವಿ

ಹಗರಿಬೊಮ್ಮನಹಳ್ಳಿ 19: ಕಳೆದ 11ತಿಂಗಳುಗಳ ವೇತನ ಸೇರಿದಂತೆ ಕೋವಿಡ್ ಪ್ಯಾಕೇಜ್ ಹಾಗೂ ವಿವಿಧ ಬೇಡಿಕೆಗಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ  ತಾಲೂಕು ಸಂಘವು ಶಾಸಕರಿಗೆ ಮನವಿ ಸಲ್ಲಿಸಿತು. 

ಈ ಸಂಧರ್ಭದಲ್ಲಿ ಹೊರಗುತ್ತಿಗೆ ನೌಕರರ ಸಂಘದ ತಾಲೂಕಾಧ್ಯಾಕ್ಷೆ ರಾಮಕ್ಕ ಮನವಿ ಸಲ್ಲಿಸಿ ಮಾತನಾಡಿ ಸರ್ಕಾರಿ ಹಾಸ್ಟೇಲ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಕೋವಿಡ್19ರ ಪ್ಯಾಕೇಜ್ ಘೋಷಣೆಯಾಗಬೇಕು, 11ತಿಂಗಳ ಬಾಕಿ ವೇತನ ಪಾವತಿಯಾಗಬೇಕು, 5ವರ್ಷ ಸೇವೆ ಸಲ್ಲಿಸಿದ ಗುತ್ತಿಗೆ ನೌಕರರಿಗೆ ನೌಕರರ ಕ್ಷೇಮಾಭೀವೃಧ್ಧಿ ಯೋಜನೆಯಲ್ಲಿ ನೇಮಕಾತಿ ಮಾಡಿಕೊಳ್ಳಬೇಕು,2019ರ ನೇರ ನೇಮಕಾತಿ ಪ್ರಕ್ರಿಯೆಯಿಂದ ಕೆಲಸ ಕಳೆದುಕೊಂಡವರಿಗೆ ನೂತನ ವಸತಿ ನಿಲಯಗಳಲ್ಲಿ ನೌಕರಿ ನೀಡಬೇಕು ಹಾಗೂ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಹಾಗೂ ಸ್ನಾತಕೋತ್ತರ ವಸತಿ ನಿಲಯಗಳಿಗೆ ಹಗಲು ಮತ್ತು ರಾತ್ರಿ ಪಾಳಿಯಂತೆ ಕಾವಲುಗಾರರನ್ನು ನೇಮಕ ಮಾಡುವ ಮೂಲಕ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ರಕ್ಷಣೆ ಒದಗಿಸುವಂತೆ ಒತ್ತಾಯಿಸಿದರು. 

ಸಿಐಟಿಯುನ ತಾಲೂಕು ಕಾರ್ಯದರ್ಶಿ ಜಗನ್ನಾಥ್ ಮಾತನಾಡಿ ಹಾಸ್ಟೇಲ್‌ಗಳಲ್ಲಿ ಹೊರಗುತ್ತಿಗೆ ಆದಾರದ ಮೇಲೆ ದುಡಿಯುತ್ತಿರುವ ನೌಕರರಿಗೆ ಶೀಘ್ರವೇ ಬಾಕಿ ವೇತನ ಸೇರಿದಂತೆ ಕೋವಿಡ್ ವೈರಸ್ ಹಾವಳಿಯಿಂದ ದುಡಿಮೆಗೆ ಕತ್ತರಿ ಬಿದ್ದ ರಜಾ ದಿನಗಳ ವೇತನವನ್ನು ಪರಿಗಣಿಸಿ ಕೂಡಲೇ ಪಾವತಿಯಾಗಬೇಕು ಎಂದು ಒತ್ತಾಯಿಸಿದರು. 

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ,ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ವಸತಿ ನಿಲಯದಲ್ಲಿ ಹೊರಗುತ್ತಿಗೆ ನೌಕರರಿಗೆ 2020ರ ಮಾರ್ಚ್‌ ನಂತರದ ವೇತನ ಪಾವತಿಯಾಗಿಲ್ಲ, ಕೋವಿಡ್19 ಪರಿಣಾಮ ಕಳೆದ ಹನ್ನೊಂದು ತಿಂಗಳುಗಳಿಂದ ವಸತಿ ನಿಲಯಗಳು ಬಂದ್ ಪರಿಣಾಮ ವೇತನ ತಡೆಹಿಡಿದಿರುವ ಕ್ರಮ ಸರಿಯಲ್ಲ,ಕಳೆದ 10ರಿಂದ 15ವರ್ಷಗಳಿಂದ ವಸತಿ ನಿಲಯದ ಕೆಲಸವನ್ನೆ ನಂಬಿ ಜೀವನ ಸಾಗಿಸುತ್ತಿರುವ ನಮಗೆ ವೇತನ ನೀಡದೆ ಜೀವನವನ್ನು ಸಾವಿನ ಸುಳಿಯಲ್ಲಿ ಸಿಲುಕಿಸುತ್ತಿರುವ ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ವೇತನ ಮಂಜೂರು ಮಾಡುವಂತೆ ಒತ್ತಾಯಿಸಿದರು. 

ಈ ಸಂಧರ್ಭದಲ್ಲಿ ಮಂಜುಳಾ, ಅನ್ನಪೂರ್ಣ, ಲಕ್ಷ್ಮೀ, ಜಮುನಾ, ಯಮುನಮ್ಮ, ಶಶಿಕಲಾ, ಟಿ.ದುರುಗಪ್ಪ, ಹನುಮಂತ ಸೇರಿದಂತೆ ಇನ್ನು ಮುಂತಾದವರು ಇದ್ದರು. 


ಸುದ್ದಿ ಓದಿ