ಸಹಕಾರಿ ಬ್ಯಾಂಕ್ ವೀಲೀನಗೊಳಿಸಲು ಸಂಘಗಳ ನಿಬಂಧಕರು ಆದೇಶ
ಬಳ್ಳಾರಿ 16: ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್ನಲ್ಲಿ ಕಾರಟಗಿಯ ಶ್ರೀಶರಣ ಬಸವೇಶ್ವರ ಸೌಹಾರ್ದ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತವನ್ನು ಸಂಪೂರ್ಣವಾಗಿ ವೀಲೀನಗೊಳಿಸಲು ಸಹಕಾರ ಸಂಘಗಳ ನಿಬಂಧಕರು ಆದೇಶ ನೀಡಿದ್ದಾರೆ.
ಈ ಕುರಿತು ಸುಕೋ ಬ್ಯಾಂಕ್ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಸಹಕಾರ ಸಂಘಗಳ ನಿಬಂಧಕ ಎಸ್. ಜಿಯಾಉಲ್ಲಾ ಅವರು ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಅಧಿನಿಯಮ 1997 ಪ್ರಕರಣ 12 ಮತ್ತು 13ರ ಪ್ರಕಾರ ಈ ಆದೇಶ ಜಾರಿ ಮಾಡಿದ್ದಾರೆ ಎಂದರು.
ಶ್ರೀ ಶರಣ ಬಸವೇಶ್ವರ ಸೌಹಾರ್ದ ಪಟ್ಟಣ ಸಹಕಾರಿ ಬ್ಯಾಂಕ್ನ ವೀಲೀನದ ಹಿನ್ನಲೆಯಲ್ಲಿ ಸುಸಜ್ಜಿತವಾದ ನೂತನ ಕಟ್ಟಡದಲ್ಲಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಸುಕೋ ಬ್ಯಾಂಕ್ನ 29ನೇ ಶಾಖೆ ಶೀಘ್ರದಲ್ಲಿ ಕಾರಟಗಿಯಲ್ಲಿ ಪ್ರಾರಂಭವಾಗಲಿದೆ. ಸುಕೋ ಬ್ಯಾಂಕ್ ತನ್ನ ವ್ಯವಹಾರವನ್ನು ದೇಶಾದ್ಯಂತ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಗಿ ಪರಿವರ್ತನೆಗೊಳ್ಳಲು ಆರ್ಬಿಐನ ಅನುಮತಿ ಪಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಸುಕೋ ಬ್ಯಾಂಕ್ ಸ್ವತಂತ್ರ ಐಎಫ್ಎಸಿ ಕೋಡ್ ಹೊಂದಿದ್ದು, ಕರ್ನಾಟಕದ ಪ್ರಭಾವಿ ಮತ್ತು ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ಆಗಿದೆ. ರಿಜರ್ವ ಬ್ಯಾಂಕ್ ಕಾರಟಗಿಯ ಶ್ರೀ ಶರಣ ಬಸವೇಶ್ವರ ಸೌಹಾರ್ದ ಪಟ್ಟಣ ಸಹಕಾರಿ ಬ್ಯಾಂಕ್ ಅನ್ನು ಸುಕೋ ಬ್ಯಾಂಕ್ನಲ್ಲಿ ವೀಲೀನ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.