ಬಳ್ಳಾರಿ

ದಿ. 27ರಂದು ಬೆಳಗಿದ ರಂಗಜ್ಯೋತಿ ಯಾತ್ರೆ

ದಿ. 27ರಂದು ಬೆಳಗಿದ ರಂಗಜ್ಯೋತಿ ಯಾತ್ರೆ

ಬಳ್ಳಾರಿ,27: ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ ಜನ್ಮ ದಿನದ ಅಂಗವಾಗಿ ಜೋಳದರಾಶಿ ಗ್ರಾಮದ ದೊಡ್ಡನಗೌಡರ ಮನೆಯಲ್ಲಿ ಸಂಭ್ರಮದಿಂದ ‘ರಂಗಜ್ಯೋತಿ’ಯನ್ನು ಬೆಳಗಿಸಲಾಯಿತು. ರಂಗತೋರಣ, ಬಳ್ಳಾರಿ ವತಿಯಿಂದ ದಿ. 28 ರಂದು ದೊಡ್ಡನಗೌಡ ರಂಗತೋರಣ ಪುರಸ್ಕಾರ ಸಮಾರಂಭದ ನಿಮಿತ್ತ ಅವರ ಜನ್ಮದಿನವಾದ ದಿ. 27ರಂದು ‘ರಂಗಜ್ಯೋತಿ’ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. 

ಜೋಳದರಾಶಿ ದೊಡ್ಡನಗೌಡರ ಕೋಣೆಯಲ್ಲಿ ಮನೆತನದವರಿಂದ ಪೂಜೆ, ಗ್ರಾಮಸ್ಥರಿಂದ ಭಜನೆ, ಕೀರ್ತನೆ ಮೂಲಕ ಬೆಳಗಿದ ‘ರಂಗಜ್ಯೋತಿ’ ಜೋಳದರಾಶಿ ಗ್ರಾಮದ ಬೀದಿಗಳಲ್ಲಿ ಬಂದಾಗ ಗ್ರಾಮದ ಶಾಲಾ ವಿದ್ಯಾರ್ಥಿಗಳು ಜ್ಯೋತಿ ಯಾತ್ರೆಗೆ ಪುಷ್ಪಾರ್ಚನೆ ಮಾಡಿದರು. ಗ್ರಾಮ ಸಂಭ್ರಮದಿಂದ ಯಾತ್ರೆಯಲ್ಲಿ ಪಾಲ್ಗೊಂಡು ದೊಡ್ಡನಗೌಡರ ಸಮಾಧಿ ಸ್ಥಳದವರೆಗೂ ಮೆರವಣಿಗೆ ನಡೆಯಿತು. 

ದೊಡ್ಡನಗೌಡರ ಸಮಾಧಿ ಬಯಲಲ್ಲಿ ಪೂಜೆ, ಪ್ರಾರ್ಥನೆ, ಭಜನೆ ನಡೆದು ರಂಗಜ್ಯೋತಿ ಯಾತ್ರೆ ಚೆಳ್ಳಗುರ್ಕಿಗೆ ಪ್ರಯಾಣ ಬೆಳೆಸಿತು. ಚೆಳ್ಳಗುರ್ಕಿ ಮಠದಲ್ಲಿ ತಾತನವರ ದಿವ್ಯ ಸಾನಿಧ್ಯಕ್ಕೆ ಪೂಜೆ, ಮಂಗಳಾರತಿಯೊಂದಿಗೆ ರಂಗಜ್ಯೋತಿ ಯಾತ್ರೆ ಸಂಪನ್ನಗೊಂಡಿತು. 

ಜ್ಯೋತಿ ಯಾತ್ರೆಯ ನೇತೃತ್ವವನ್ನು ರಂಗತೋರಣ ಬಳ್ಳಾರಿಯ ಪ್ರಭುದೇವ ಕಪ್ಪಗಲ್ಲು, ಅಡವಿಸ್ವಾಮಿ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ ಹಾಗೂ ರಾಮೇಶ ಟ್ರಸ್ಟ್‌ನ ಅಧ್ಯಕ್ಷರಾದ ಕೆ.ಪೊಂಪನಗೌಡ, ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ಹೆಚ್‌.ತಿಪ್ಪೇಸ್ವಾಮಿ ಮತ್ತು ಪದಾಧಿಕಾರಿಗಳು, ರಾಘವ ಪ್ರಶಸ್ತಿ ಪುರಸ್ಕೃತ ಶಿವೇಶ್ವರಗೌಡ, ಆಲಾಪ ಸಂಗೀತ ಕಲಾ ಟ್ರಸ್ಟ್‌ ರಮಣಪ್ಪ ಭಜಂತ್ರಿ, ವೆಂಕಟೇಶ ಬಡಿಗೇರ, ತೊಗಲುಗೊಂಬೆ ಕಲಾವಿದ ಸುಬ್ಬಣ್ಣ, ನೃತ್ಯ ಶಿಕ್ಷಕ ಜಯಣ್ಣ ಸೇರಿದಂತೆ ಜೋಳದರಾಶಿ ಹಾಗೂ ಚೆಳ್ಳಗುರ್ಕಿ ಗ್ರಾಮಸ್ಥರು ಪಾಲ್ಗೊಂಡಿದ್ದರು. 

ದಿ. 28, ಭಾನುವಾರ ಸಂಜೆ 6.00 ಗಂಟೆಗೆ ರಾಘವ ಕಲಾಮಂದಿರದಲ್ಲಿ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ ಸಮಾರಂಭ ನಡೆಯಲಿದೆ. 


ಸುದ್ದಿ ಓದಿ