ಎನ್.ಜೆ.ರಾಜಶೇಖರ ಅಗಲಿಕೆಗೆ ರಂಭಾಪುರಿಶ್ರೀ ಸಂತಾಪ
ಎನ್.ಜೆ.ರಾಜಶೇಖರ ಅಗಲಿಕೆಗೆ ರಂಭಾಪುರಿಶ್ರೀ ಸಂತಾಪ
ಶಿವಮೊಗ್ಗ 29: ವೀರಶೈವ ಕಲ್ಯಾಣ ಮಂದಿರದ ಅಧ್ಯಕ್ಷರು, ಮಾಜಿ ನಗರಸಭಾಧ್ಯಕ್ಷರಾಗಿದ್ದ ಶಿವಮೊಗ್ಗದ ಎನ್.ಜೆ.ರಾಜಶೇಖರ (ಸುಭಾಷ್) ಅಗಲಿಕೆಗೆ ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಮ್ಮ ಸಂತಾಪ ವ್ಯಕ್ತಪಡಿಸಿದರು. ಅವರು ಸೋಮವಾರ ನಗರದ ರಾಜಶೇಖರ್ ಅವರ ನಿವಾಸಕ್ಕೆ ಭೇಟಿ ನೀಡಿ ಮೃತರ ಪಾರ್ಥೀವ ಶರೀರಕ್ಕೆ ಪುಷ್ಪಗುಚ್ಛವಿರಿಸಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ವೀರಶೈವ ಸಮಾಜದ ಮುಖಂಡರಾಗಿದ್ದ ಸುಭಾಷ್ ಅವರು ರಾಜಕೀಯ ಸಾಮಾಜಿಕ ಮತ್ತು ಧರ್ಮ ಕಾರ್ಯಗಳಲ್ಲಿ ಸದಾ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬಸವೇಶ್ವರ ಸೇವಾ ಸಮಾಜದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಅವರು ನಾಲ್ಕು ಬಾರಿ ನಗರಸಭಾ ಸದಸ್ಯರಾಗಿ ಒಂದು ಬಾರಿ ನಗರಸಭಾಧ್ಯಕ್ಷರಾಗಿ ಜನಹಿತ ಕಾರ್ಯಗಳನ್ನು ಮಾಡಿದ್ದಾರೆ. ನಗರದಲ್ಲಿ ಈ ಹಿಂದೆ ನಡೆದ ಜಗದ್ಗುರು ಪಂಚಾಚಾರ್ಯರ ಉತ್ಸವ, ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನಗಳಲ್ಲಿ ಅವರು ಉತ್ಸಾಹದಿಂದ ಕೆಲಸ ಮಾಡಿದ್ದನ್ನು ಮರೆಯುವಂತಿಲ್ಲ. ಜಗದ್ಗುರು ರಂಭಾಪುರಿ ಪೀಠದ ಜೊತೆಗೆ ಬಹಳ ಹತ್ತಿರದ ಸಂಬಂಧ ಹೊಂದಿದ್ದ ಅವರ ಅಗಲಿಕೆ ನೋವನ್ನುಂಟು ಮಾಡಿದೆ. ದಯಾಘನನಾದ ಪರಮಾತ್ಮನು ಅವರ ಪವಿತ್ರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟಂಬ ವರ್ಗದವರಿಗೆ ನೀಡಲಿ ಎಂದು ರಂಭಾಪುರಿ ಜಗದ್ಗುರುಗಳು ತಿಳಿಸಿದರು. ಎಡೆಯೂರು, ಬಿಳಿಕಿ, ಮಳಲಿ, ತಾವರೆಕೆರೆ, ಹಾರನಹಳ್ಳಿ ಇನ್ನುಳಿದ ಮಠಾಧೀಶರು ಇದ್ದರು.