ಬಳ್ಳಾರಿ

ಆದಿವಾಸಿ ದಲಿತರ, ಮಹಿಳೆಯರ ಧ್ವನಿ ರಮಣಿಕಾ ಗುಪ್ತಾ: ನಾಮದೇವಗೌಡ

ಆದಿವಾಸಿ ದಲಿತರ, ಮಹಿಳೆಯರ ಧ್ವನಿ ರಮಣಿಕಾ ಗುಪ್ತಾ: ನಾಮದೇವಗೌಡ

ವಿಎಸ್‌ಕೆ ವಿವಿಯಲ್ಲಿ ಪ್ರಚಾರ ಉಪನ್ಯಾಸ ಮಾಲಿಕೆಯ ಸರಣಿ ಉಪನ್ಯಾಸ 

ಬಳ್ಳಾರಿ 29: ಖ್ಯಾತ ಹಿಂದಿ ಸಾಹಿತಿ ದಿ. ರಮಣಿಕಾ ಗುಪ್ತಾ ದಲಿತರ ಮತ್ತು ಮಹಿಳೆಯರ ಹಕ್ಕುಗಳ ಹೋರಾಟದ ಮುಖವಾಗಿದ್ದರು ಎಂದು ವಿಜಯಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ ಹಿಂದಿ ಪ್ರಾಧ್ಯಾಪಕರಾದ ಪ್ರೊ. ನಾಮದೇವ ಗೌಡ ಹೇಳಿದರು. 

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್‌. ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಜಾದಿ ಕಿ ಅಮೃತ್ ಮಹೋತ್ಸವ 2022 ಪ್ರಸಾರಾಂಗ ಪ್ರಚಾರ ಉಪನ್ಯಾಸ ಮಾಲಿಕೆಯ ಸರಣಿ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ  ನೀಡಿ ಅವರು ಮಾತನಾಡಿದರು. 

ಗುಪ್ತಾ ಅವರು ಸಾಂಸ್ಕೃತಿಕ ಸೃಷ್ಟಿಕರ್ತರಾಗಿ ಮತ್ತು ಸಂಘಟಕರಾಗಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಹೊಂದಿದ್ದರು. ಅವರು ಆದಿವಾಸಿ, ದಲಿತ ಸಮುದಾಯದ ಸಾಹಿತ್ಯದ ನಾದವನ್ನು ಸ್ಪಷ್ಟಪಡಿಸಿದವರು. ಮಹಿಳಾ ವಿಮೋಚನೆಯ ಜೊತೆಗೆ, ಜಾರ್ಖಂಡ್ ಸೇರಿದಂತೆ ದೇಶದ ಬುಡಕಟ್ಟು ಸಾಹಿತ್ಯದ ಧ್ವನಿಯನ್ನು ಮುಖ್ಯವಾಹಿನಿಗೆ ತರಲು ಅವರು ನೀಡಿದ ಅನನ್ಯ ಕೊಡಗೆಯನ್ನು ಮರೆಯಲಾಗುವುದಿಲ್ಲ ಎಂದು ಅವರನ್ನು ಸ್ಮರಿಸಿದರು. 

ಅವರ ಕೃತಿಗಳ ಮೂಲಕ ಮಹಿಳೆಯರಲ್ಲಿ ಕ್ರಾಂತಿಕಾರಿ ಜ್ವಾಲೆಯನ್ನು ಮೂಡಿಸುತ್ತಿದ್ದರು. ಪುರುಷ ಪ್ರಧಾನ ಸಮಾಜದಲ್ಲಿ ಪ್ರತಿಯೊಬ್ಬ ಮಹಿಳೆಯು ತನ್ನದೇ ಸ್ವಾತಂತ್ರವನ್ನು ಹೊಂದಿರುತ್ತಾಳೆ. ಆ ಸ್ವಾತಂತ್ರವನ್ನು ಪಡೆಯಲು ಹೋರಾಟ ಮುಖ್ಯ ಎಂದು ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು. 

ಈ ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿಯ ಕುಲಪತಿಯಾದ ಪ್ರೊ. ಸಿದ್ದು ಪಿ. ಆಲಗೂರ ಅವರು ಇಂತಹ ಮಹಿಳಾ ಸಾಧಕರ ಉಪನ್ಯಾಸಗಳಿಂದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿವೆ ಎಂದು ಅಭಿಪ್ರಾಯಪಟ್ಟರು.  

ಮುಂದಿನ ದಿನಗಳಲ್ಲಿ ಪ್ರತಿ ವರ್ಷವೂ ರಮಣಿಕಾ ಗುಪ್ತಾ ಅವರ ಜನ್ಮ ದಿನದ  ಸ್ಮರಣಾರ್ಥ ವಿಶ್ವವಿದ್ಯಾಲಯಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು. ಗುಪ್ತಾ ಅವರ ಜೀವನ ಚರಿತ್ರೆ ಬಗ್ಗೆ ಸಂಕ್ಷಿಪ್ತವಾಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟ ಅತಿಥಿಗೆ ಅವರು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು. 

ವಿವಿಯ ಪ್ರೊ. ರಾಬರ್ಟ ಜೋಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಸಾರಾಂಗ ನಿರ್ದೇಶಕರಾದ ಪ್ರೊ. ಶಾಂತನಾಯ್ಕ್‌. ಎನ್‌. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನೇಶ್ ಕಾರ್ಯಕ್ರಮ ನಿರೂಪಿಸಿದರು. ಅಣ್ಣಾಜಿ ಕೃಷ್ಣ ರೆಡ್ಡಿ ವಂದಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. 


ಸುದ್ದಿ ಓದಿ