ಸಮಾಜದ ಋಣ ತೀರಿಸುವ ಮೂಲಕ ಹುಟ್ಟು ಹಬ್ಬ ಆಚರಣೆ
ಮಹಾಲಿಂಗಪುರ 03: ಸಮೀಪದ ಹಂದಿಗುಂದ ಗ್ರಾಮದ ಗೌಡ್ರು, ಸಮೀರವಾಡಿ ಸಕ್ಕರೆ ಕಾರ್ಖಾನೆಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ ಅವರು 62 ನೇ ಹುಟ್ಟು ಹಬ್ಬವನ್ನು ವಿಭಿನ್ನವಾಗಿ, ಸಮಾಜದ ಋಣ ತೀರಿಸುವ ಮೂಲಕ ಆಚರಿಸಿಕೊಂಡು ಗಮನ ಸೆಳೆದರು.
ತಮ್ಮ ಹುಟ್ಟೂರು ಹಂದಿಗುಂದ ಗ್ರಾಮದಲ್ಲಿ, ಬಿಸನಾಳ ಸರಹದ್ದಿನ ತಮ್ಮ ತೋಟದ ಮನೆಯಲ್ಲಿ ಪರಿವಾರದವರು ಹಾಗೂ ಗ್ರಾಮಸ್ಥರು ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸುವ ಪ್ರಸ್ತಾಪ ಮಾಡಿದಾಗ ಬರೀ ನಾನೇ ಸಂಭ್ರಮಿಸುವುದರಲ್ಲಿ ಅರ್ಥವಿಲ್ಲ, ನನ್ನ ಒಡನಾಡಿಗಳಿಗೂ ಸಂಭ್ರಮ ಉಂಟು ಮಾಡುವಂತಾದರೆ ಹುಟ್ಟು ಹಬ್ಬಕ್ಕೆ ಅರ್ಥ ಬರುತ್ತದೆ. ಹಾಗಾಗಿ ನನ್ನ ಬಾಲ್ಯದ ಗೆಳೆಯರು, ಸಹಪಾಠಿಗಳು, ಹಿರಿಯರು ಸೇರಿದಂತೆ ಸಮಕಾಲೀನ ನೂರಾರು ಜನರನ್ನು ಸನ್ಮಾನಿಸಿ ಗೌರವಿಸಿದ ನಂತರವೇ ಕೇಕ್ ಕತ್ತರಿಸುವುದಾಗಿ ಗೌಡ್ರು ಪಟ್ಟು ಹಿಡಿದರು. ಅವರ ಇಚ್ಚೆಯಂತೆ ಮಕ್ಕಳು ಊರ ತುಂಬ ಸಂಚರಿಸಿ ಅವರ ಸಮಕಾಲೀನ ಹಿರಿಯರನ್ನು ಹುಡುಕಿ ಕಾರ್ಯಕ್ರಮಕ್ಕೆ ಕರೆತಂದರು. 120ಕ್ಕೂ ಹೆಚ್ಚು ಜನರಿಗೆ ಗೌಡ್ರ ಮಕ್ಕಳು ಶಾಲು ಹೊದಿಸಿ, ಹಾರ ಹಾಕಿ ಕಾಲಿಗೆ ಬಿದ್ದು ಗೌರವಿಸಿದ ನಂತರವೇ ಅವರೆಲ್ಲರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡರು. ಜೊತೆಗೆ ಗ್ರಾಪಂ ನೂತನ ಸದಸ್ಯರನ್ನೂ ಸನ್ಮಾನಿಸಿದರು.
ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಗೌಡ್ರ ಮನೆಗೆ ತೆರಳಿ ಆಶಿರ್ವದಿಸಿದ್ದರು. ರಾಮನಗೌಡ ಪಾಟೀಲ, ಮಲ್ಲಗೌಡ ಪಾಟೀಲ, ಸಿದ್ದಗೌಡ ಪಾಟೀಲ, ಪರಗೌಡ ಪಾಟೀಲ, ಶಂಕರಗೌಡ ಪಾಟೀಲ, ಬನಪ್ಪ ತೇಲಿ, ರಂಗನಗೌಡ ಪಾಟೀಲ, ಮಲ್ಲಿಕಾರ್ಜುನ ಖಾನಗೌಡ, ಮಹಾಲಿಂಗಪ್ಪ ಸನದಿ, ಓಸ್ವಾಲ್, ಕೃಷ್ಣಪ್ಪ ಮಂಟೂರ, ಗ್ರಾಪಂ ಅಧ್ಯಕ್ಷ ಶ್ರೀಶೈಲ ಪಾಟೀಲ ಸೇರಿದಂತೆ ಹಂದಿಗುಂದ, ಬಿಸನಾಳ, ಸೈದಾಪೂರ, ಅವರಾದಿ, ಬೆಲ್ಲದ ಬಾಗೇವಾಡಿ ಗ್ರಾಮದ ಬಂಧುಗಳು ಭಾಗವಹಿಸಿ ಶುಭ ಹಾರೈಸಿದರು.
ನಾನೆಂದೂ ಆಡಂಬರದ ಜೀವನ ನಡೆಸಿದವನಲ್ಲ, ಹುಟ್ಟು ಹಬ್ಬ ಅದ್ದೂರಿಗಿಂತ ಅರ್ಥಪೂರ್ಣವಾಗಿರಬೇಕೆಂದು ಬಯಸಿದೆ. ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ಸಮಾಜ ಬಾಂಧವರಿಗೆ ಋಣಿಯಾಗಿರಬೇಕು. ಬಡವರಿರಲಿ, ಸಿರಿವಂತರಿರಲಿ ನನ್ನೊಂದಿಗೆ ಬೆಳೆದವರನ್ನು, ನನ್ನ ಬೆಳೆಸಿದವರನ್ನು ಸ್ಮರಿಸುವ ಮತ್ತು ಸತ್ಕರಿಸುವ ಮೂಲಕ ಸಮಾಜದ ಋಣ ತೀರಿಸುವ ಯತ್ನ ಮಾಡಿದೆ.
-ರಾಮನಗೌಡ ಪಾಟೀಲ,
ಅಧ್ಯಕ್ಷ ಕಬ್ಬು ಬೆಳೆಗಾರ ಸಂಘ, ಸಮೀರವಾಡಿ-ಹಂದಿಗುಂದ