ಮಹಲಿಂಗಪುರ

ಢವಳೇಶ್ವರದಲ್ಲಿ ಸಾಧಕ ಸಹೋದರಿಯರೊಂದಿಗೆ ರಕ್ಷಾ ಬಂಧನ !

ಢವಳೇಶ್ವರದಲ್ಲಿ ಸಾಧಕ ಸಹೋದರಿಯರೊಂದಿಗೆ ರಕ್ಷಾ ಬಂಧನ !
ಮಹಾಲಿಂಗಪುರ ಸಮೀಪದ ಢವಳೇಶ್ವರ ಗ್ರಾಮದಲ್ಲಿ ಸಾಧಕ ಸೋದರಿಯರಿಂದ ರಾಖಿ ಕಟ್ಟಿಸಿಕೊಂಡು ಅವರ ಸಾಧನೆಗೆ ಪ್ರೋತ್ಸಾಹ ನೀಡಿದ ಸ

ಮಹಾಲಿಂಗಪುರ 25: ಗ್ರಾಮದ ಗಡದೇಶ್ವರ ದೇವಸ್ಥಾನದಲ್ಲಿ ಸ್ವಾಮಿ ವಿವೇಕಾನಂದ ಪ್ರತಿಷ್ಠಾನದ ಸದಸ್ಯರು ರಕ್ಷಾ ಬಂಧನವನ್ನು ವಿಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಿದರು. 

ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಕಲಿತು ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಮೊದಲ ರ‍್ಯಾಂಕ್ ಮತ್ತು ಜಿಲ್ಲೆಗೆ 2ನೇ ರ‍್ಯಾಂಕ್ ಪಡೆದ ಭಾಗ್ಯಶ್ರೀ ಹಿರೇಮಠ, ಶಾಲೆಗೆ 2ನೇ ರ‍್ಯಾಂಕ್ ಪಡೆದ ಶಿವಲೀಲಾ ಪಟ್ಟಣಶೆಟ್ಟಿ, 3ನೇ ರ‍್ಯಾಂಕ್ ಪಡೆದ ಅಕ್ಷತಾ ದಳವಾಯಿ ಎಂಬ ಸಾಧಕ ಬಾಲಕಿಯರನ್ನು ಕರೆಸಿ ಅವರಿಂದ ರಕ್ಷಾ ಬಂಧನ ಕಟ್ಟಿಸಿಕೊಂಡು ಶುಭ ಹಾರೈಸಿದರು. ಗ್ರಾಮದ ಯುವ ಮುಖಂಡ ಚನ್ನಪ್ಪ ಪಟ್ಟಣಶೆಟ್ಟಿ ಆ ಮೂವರು ಬಾಲಕಿಯರಿಗೆ ಸನ್ಮಾನಿಸಿ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಪ್ರೋತ್ಸಾಹ ಧನ ನೀಡಿದರು. ಅಲ್ಲದೇ ಸಾಧನೆಗೆ ಪೂರಕವಾಗಿ ಅಗತ್ಯ ನೆರವಿನ ಭರವಸೆ ನೀಡಿದರು.

ಸನ್ಮಾನ ಸ್ವೀಕರಿಸಿದ ಬಾಲಕಿಯರು ವೇದಿಕೆ ಮೇಲೆಯೇ ಧೈರ್ಯವಾಗಿ ತಮ್ಮ ಗುರಿ ಮತ್ತು ಕನಸುಗಳನ್ನು ಊರಿನ ಸೋದರರ ಮುಂದೆ ಹಂಚಿಕೊಂಡರು. 

ಭಾಗ್ಯಶ್ರೀ ತಾನು ಐಎಎಸ್ ಅಧಿಕಾರಿಯಾಗುವುದಾಗಿ, ಶಿವಲೀಲಾ ಡಿಸಿ ಆಗಿ ಸೇವೆ ಮಾಡುವುದಾಗಿ ಹಾಗೂ ಅಕ್ಷತಾ ಡಾಕ್ಟರ್ ಆಗಿ ಹಳ್ಳಿಯಲ್ಲಿ ಸೇವೆ ಸಲ್ಲಿಸುವುದಾಗಿ ತಮ್ಮ ಉತ್ಕಟ ಇಚ್ಚೆ ವ್ಯಕ್ತಪಡಿಸಿದರು. 

ಎಲ್ಲರೂ ಆ ಬಾಲಕಿಯರಿಂದ ರಾಖಿ ಕಟ್ಟಿಸಿಕೊಂಡು ನಮ್ಮೂರಿನ ಹೆಮ್ಮೆಯ ಸಹೋದರಿಯರ ಸಾಧನೆಯ ಉತ್ಸಾಹಕ್ಕೆ ಪ್ರತಿ ಹಂತದಲ್ಲೂ ಪ್ರೋತ್ಸಾಹ ನೀಡಲು ಬದ್ದರಿದ್ದೇವೆ ಎಂದು ವಾಗ್ದಾನ ಮಾಡಿದರು. 

ನಾನು ಓದಿ ಐಎಎಸ್ ಮಾಡ್ತೀನಿ, ನಾನು ಡಿಸಿ ಆಗ್ತೀನಿ, ನಾನು ಡಾಕ್ಟರ್ ಆಗಿ ಹಳ್ಳಿಯಲ್ಲಿ ಸೇವೆ ಮಾಡ್ತೀನಿ ಎಂದು ಹುಮ್ಮಸ್ಸಿನಿಂದ ಮಾತನಾಡಿದ ಬಾಲಕಿಯರ ಉತ್ಸಾಹದ ಮಾತುಗಳು. ಅವರ ಸಾಧನೆಯ ನೆರವಿಗೆ ನಾವಿದ್ದೇವೆ ಎಂದು ಹೆಮ್ಮೆಯಿಂದ ಊರವರು ಭರವಸೆ ನೀಡಿ ಹೇಳಿದ ಪ್ರೋತ್ಸಾಹದ ಮಾತುಗಳು. ಸಾಧಕ ಸೋದರಿಯರಿಗೆ ಸನ್ಮಾನಗಳು, ಶಿಕ್ಷಣ ಮತ್ತು ಗುರಿ ಸಾಧನೆಯ ಪ್ರತಿ ಹಂತದಲ್ಲೂ ನೆರವಾಗುವ ವಾಗ್ದಾನಗಳು. ಇವು ನಿಜಕ್ಕೂ ಢವಳೇಶ್ವರ ಗ್ರಾಮದ ಶೈಕ್ಷಣಿಕ ಕಳಕಳಿಗೆ ಸಾಕ್ಷಿಯಾಗಿವೆ. ಇಂಥ ಉತ್ಸಾಹ ಮತ್ತು ಪ್ರೋತ್ಸಾಹ ಇತರರಿಗೆ ಮಾದರಿಯಾಗಲಿ ಎಂದು ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.

ಗ್ರಾಪಂ ಅಧ್ಯಕ್ಷ ಗೋಪಾಲ ಮಾಂಗ, ಉಪಾಧ್ಯಕ್ಷ ಲಕ್ಷ ್ಮಣ ಪಟ್ಟಣಶೆಟ್ಟಿ, ಕಲ್ಲಪ್ಪ ಸಂಗನ್ನವರ, ಅಶೋಕ ಕಾಶಿರಗೋಳ, ರೇವಣೇಶ ಬ್ಯಾಳಿ, ಚನ್ನಪ್ಪ ಪಟ್ಟಣಶೆಟ್ಟಿ, ಚನ್ನಬಸು ಯರಗಟ್ಟಿ, ಮಹೇಶ ಚಿಂಚಲಿ, ಗಂಗಾಧರ ಸಂಗನ್ನವರ, ಮಹಾಲಿಂಗ ಪಟ್ಟಣಶೆಟ್ಟಿ, ಸಂಗಮೇಶ ನಾರಗೌಡ ಹಾಗೂ ಸ್ವಾಮಿ ವಿವೇಕಾನಂದ ಪ್ರತಿಷ್ಠಾನದ ಸದಸ್ಯರು ಇದ್ದರು. 

ಸುದ್ದಿ ಓದಿ