ಯುವಕರಲ್ಲಿ ಪರಿಸರ ಜಾಗೃತಿ ಮೂಡಿಸಿ: ಮುಂಡ್ರಿಗಿ ನಾಗರಾಜ್ ಮೆಚ್ಚುಗೆ
ಬಳ್ಳಾರಿ 27: ಮೊಬೈಲ್ನಲ್ಲಿ ತಲ್ಲೀನರಾಗಿ ತಮ್ಮ ಭವಿಷ್ಯಕ್ಕೆ ಕುತ್ತು ತಂದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಪರಿಸರ ಉಳಿಸಿ ಬೆಳೆಸುವ ಕುರಿತು ಮನೆ ಮನೆಗೂ ತೆರಳಿ ಗಿಡಮರಗಳ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿರುವ ಬಳ್ಳಾರಿಯ ಯುವಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ಚಿತ್ರದುರ್ಗ ಜಿ.ಪಂ.ಸದಸ್ಯರೂ ಆಗಿರುವ ಕಾಂಗ್ರೆಸ್ ಧುರೀಣ ಮುಂಡ್ರಿಗಿ ನಾಗರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಪಿ ನ್ಯೂಸ್ ನೇತೃತ್ವದಲ್ಲಿ ಸಮಾಜ ಸೇವಕ ಮುಂಡ್ರಿಗಿ ನಾಗರಾಜ್ ಅಭಿಮಾನಿಗಳ ಬಳಗ, ರಾಯಚೂರಿನ ವನಸಿರಿ ಫೌಂಡೇಶನ್, ಬೆಂಗಳೂರಿನ ಸಿದ್ಧಸಿರಿ ಫೌಂಡೇಶನ್ ವತಿಯಿಂದ ಬಳ್ಳಾರಿ ಮಹಾನಗರ ಪಾಲಿಕೆಯ 5ನೇ ವಾರ್ಡ್ನಲ್ಲಿ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಬೇವಿನ ಮರ, ಹೊಂಗೆ ಮರ ಸೇರಿದಂತೆ ಹಲವು ಓಷಧೀಯ ಹಾಗೂ ಆಮ್ಲಜನಕ ಪ್ರೇರಿತ 500 ಸಸಿಗಳನ್ನು ನೆಡುವ ಮೂಲಕ ಮಾದರಿ ನಡೆ ಅನುಸರಿಸಿದ್ದಾರೆ. ಮನೆ ಮನೆಗೂ ತೆರಳಿ ಸಸಿ ವಿತರಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಯುವಕರ ಈ ಪರಿಸರ ಕಾಳಜಿ ಮೆಚ್ಚುವಂಥದ್ದು. ಕೋವಿಡ್-19 ಹೆಸರಿನ ಹೆಮ್ಮಾರಿ ಎಲ್ಲರನ್ನೂ ಬಾಧಿಸಿದೆ. ಈವೇಳೆ ಪರಿಸರ ಉಳಿಸಿ ಬೆಳೆಸಲು ಯುವಕರು ಮುಂದಾಗಿರುವುದು ಹೆಮ್ಮೆಯ ವಿಷಯ. ಶಾಲಾ ಮೈದಾನ ಮತ್ತು ಸ್ಮಶಾನದಲ್ಲೂ ಗಿಡ ನೆಟ್ಟು ಪೋಷಿಸುವ ಯುವಕರ ಪರಿಸರ ಕಾಳಜಿಗೆ ಅಭಿನಂದನೆ ಸಲ್ಲಿಸಿದರು. ನಗರ ನಿವಾಸಿಗಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸಲು ಮನೆ ಮನೆಗೂ ತೆರಳಿ ಸಸಿಗಳನ್ನು ನೀಡುತ್ತಿರುವ ಯುವಕರು ಎಲ್ಲರಲ್ಲೂ ಪರಿಸರ ಪ್ರಜ್ಞೆ ಮೂಡುವಂತೆ ಪ್ರೇರೇಪಿಸುತ್ತಿದ್ದಾರೆ ಎಂದರು.
ಮುಂಡ್ರಿಗಿ ಗ್ರಾಮದಲ್ಲಿ ನಡೆದ ಈ ಕಾರ್ಯಕ್ರಮದ ಬಳಿಕ ಸಸಿಗಳ ರಕ್ಷಣೆ ಹಾಗೂ ನಿರ್ವಹಣೆಯನ್ನು ಗ್ರಾಮದ ಯುವಕ ಶ್ರೀನಿವಾಸ್ ಜಾವೇದಾರ್ ಅವರಿಗೆ ಒದಗಿಸಲಾಯಿತು.
5ನೇ ವಾರ್ಡಿನ ಪಾಲಿಕೆ ಸದಸ್ಯ ರಾಜಶೇಖರ್, ಕರ್ನಾಟಕ ರಾಜ್ಯ ಪದವೀಧರ ವೇದಿಕೆ ರಾಜ್ಯಾಧ್ಯಕ್ಷ ಕೆ.ಕೆ.ಹಾಳ್ ಗೋವರ್ಧನ್, ಕೆಪಿಎಸ್ ಮುಖ್ಯಸ್ಥ ರತ್ನಯ್ಯ ಅಲ್ಲಿಪುರ, ಕಾಂಗ್ರೆಸ್ ಪಕ್ಷದ ಮುಖಂಡ ವೆಂಕಟೇಶ್, ಮುಂಡ್ರಿಗಿ ಗ್ರಾಮದ ಯುವ ಮುಖಂಡ ಅರುಣ್ ಕುಮಾರ್, ಸಿದ್ಧಗುರು ಫೌಂಡೇಶನ್ ಮುಖ್ಯಸ್ಥ ಉಮೇಶ್ ಕುಮಾರ್ ಜಿ., ವನಸಿರಿ ಫೌಂಡೇಶನ್ ಮುಖ್ಯಸ್ಥ ಅಮರೇಗೌಡ ಮಲ್ಲಾಪುರ, ಸದಸ್ಯರಾದ ಪ್ರದೀಪ್, ರಮೇಶ್ ಮತ್ತು ಬಿಪಿ ನ್ಯೂಸ್ ನ ಸಂಪಾದಕ ಅರುಣ್ ಭೂಪಾಲ್ ಇನ್ನಿತರರು ಇದ್ದರು.