ಕಳ್ಳತನ ಪ್ರಕರಣ ಭೇದಿಸಿದ ರಾಯಬಾಗ ಪೊಲೀಸರು: ರೂ. 4.50 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಬೈಕ್ ವಶ
ರಾಯಬಾಗ: ತಾಲೂಕಿನ ಕಂಕಣವಾಡಿ ಗ್ರಾಮದ ಹಾಲಸಿದ್ದೇಶ್ವರ ತೋಟದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವನ್ನು ರಾಯಬಾಗ ಪೊಲೀಸರು ಭೇದಿಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಕಂಕಣವಾಡಿ ಗ್ರಾಮದ ಹಾಲಸಿದ್ದೇಶ್ವರ ತೋಟದ ಅಪ್ಪಯ್ಯಾ ಸಿದ್ದಪ್ಪ ದಳವಾಯಿ (27) ಬಂಧಿತ ಆರೋಪಿ. ಆತನಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ರೂ. 4.50 ಲಕ್ಷ ಮೌಲ್ಯದ 3.5 ತೊಲೆ ನಿವ್ವಳ ತೂಕದ ಚಿನ್ನಾಭರಣಗಳು, ರೂ.17 ಸಾವಿರ ನಗದು ಹಾಗೂ ರೂ.60 ಸಾವಿರ ಮೌಲ್ಯದ ಮೋಟಾರ್ ಸೈಕಲ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನಾಭರಣಗಳಲ್ಲಿ ನೆಕ್ಲೆಸ್, ಚೈನ್ ಹಾಗೂ ಕಿವಿಯ ಹೂವು ಸೇರಿವೆ.
ಆಗಸ್ಟ್ 15ರಂದು ಪಿರ್ಯಾದುದಾರರ ತಂದೆ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ರಾತ್ರಿ ಸುಮಾರು 8 ಗಂಟೆಗೆ ಮನೆಯ ಬಾಗಿಲಿಗೆ ಕೀಲಿ ಹಾಕಿಕೊಂಡು ಕುಟುಂಬದವರೆಲ್ಲರೂ ಪಕ್ಕದ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮುಂಬಾಗಿಲಿನ ಕೀಲಿ ಮುರಿದು ಒಳನುಗ್ಗಿ, ಮನೆಯಲ್ಲಿದ್ದ 3.5 ತೊಲೆ ಚಿನ್ನಾಭರಣ ಹಾಗೂ ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ತ್ವರಿತವಾಗಿ ಪತ್ತೆಹಚ್ಚಲು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ. ಬಸರಗಿ ಅವರ ನಿರ್ದೇಶನದಂತೆ, ಅಥಣಿ ಉಪವಿಭಾಗದ ಡಿವೈಎಸ್‌ಪಿ ಪ್ರಶಾಂತ ಮುನ್ನೋಳಿ ಅವರ ಮಾರ್ಗದರ್ಶನದಲ್ಲಿ ರಾಯಬಾಗ ಪೊಲೀಸ್ ಠಾಣೆಯ ಸಿಪಿಐ ಎಂ.ಎಂ. ಡಪ್ಪಿನ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ತಂಡದಲ್ಲಿ ಎಸ್.ಎಸ್. ಅರಭಾವಿ, ಸಿ.ಬಿ. ಪಾಟೀಲ, ಆರೀಫ್ ಮುದ್ದಾಳ, ಡಿ.ಟಿ. ಶಾನವಾಡ ಹಾಗೂ ಬೆಳಗಾವಿ ಟೆಕ್ನಿಕಲ್ ಸೆಲ್‌ನ ಸಚಿನ ಪಾಟೀಲ ಅವರು ಕಾರ್ಯನಿರ್ವಹಿಸಿದ್ದರು.
ಪ್ರಕರಣವನ್ನು ತ್ವರಿತವಾಗಿ ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ ಪೊಲೀಸ್ ತಂಡದ ಕಾರ್ಯಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.