ರೇಬಿಸ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ
ಮುದ್ದೇಬಿಹಾಳ 29: ತಾಲೂಕಿನ ಬಿದರಕುಂದಿ ಗ್ರಾಮದ ವ್ಯಾಪ್ತಿಯ ಸರ್ಕಾರಿ ಆದರ್ಶ ವಿದ್ಯಾಲಯ ಬಿದರಕುಂದಿಯಲ್ಲಿ ಇಕೋ ಕ್ಲಬ್ ಅಡಿಯಲ್ಲಿ ಗೋ ಗ್ರೀನ್ ಕಾರ್ಯಕ್ರಮ ಹಾಗೂ ಪಶುಪಾಲನೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ರೇಬಿಸ್ ದಿನಾಚರಣೆ ಅಂಗವಾಗಿ ರೇಬಿಸ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.
ಈ ವೇಳೆ ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಾನಂದ ಮೇಟಿ, ತಾಲೂಕಿನ ಮುಖ್ಯ ಪಶುವೈದ್ಯಧಿಕಾರಿ ಸುರೇಶ ಭಜಂತ್ರಿ ಹಾಗೂ ಬಸವರಾಜ ಸಜ್ಜನ ಮಾತನಾಡಿ ರೇಬಿಸ್ ಅನ್ನುವುದು ಸಸ್ತನಿಗಳಲ್ಲಿ ವೈರಾಣುವಿನಿಂದ ಹರಡುವ ಕಾಯಿಲೆಯಾಗಿದೆ. ಶ್ವಾನಗಳಿಂದ (ಕಡಿತ ಅಥವಾ ಲಾಲಾರಸದ ಸಂಪರ್ಕದಿಂದ) ಮನುಷ್ಯನ ದೇಹಕ್ಕೆ ಹರಡುತ್ತದೆ. ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ಮಿದುಳಿಗೆ ಘಾಸಿಯಾಗಿ ಸಾವು ಸಂಭವಿಸುತ್ತವೆ. ಆರಂಭದಲ್ಲಿಯೇ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದರೆ ಇದು ಗುಣಪಡಿಸಬಹುದಾದ ಕಾಯಿಲೆ ಎನ್ನುವುದು ಆದರೆ ಹಾಗಂತ ನಿರ್ಲಕ್ಷವಹಿಸುವುದು ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸಪ್ಟೆಂಬರ 28 ಅನ್ನು ವಿಶ್ವ ರೇಬಿಸ್ ದಿನವೆಂದು ಆಚರಿಸಲಾಗುತ್ತದೆ. ರೇಬಿಸ್ಗೆ ಮೊದಲು ಲಸಿಕೆ ಕಂಡುಹಿಡಿದ ಲೂಯಿ ಪಾಶ್ಚರ್ ಮರಣ ಹೊಂದಿದ ದಿನವನ್ನು 2007ರಿಂದ ವಿಶ್ವ ರೇಬಿಸ್ ದಿನವೆಂದು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ರೇಬಿಸ್ ಕುರಿತು ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮೂಲ ಆಶಯ. ಶ್ವಾನಗಳಿಂದ ಮನುಷ್ಯನಿಗೆ ರೇಬಿಸ್ ಹರಡುವುದನ್ನು 2030ರ ಒಳಗೆ ತಡೆಯುವ ಗುರಿಯನ್ನು ಇರಿಸಿಕೊಳ್ಳಲಾಗಿದೆ.
ವಿಶ್ವ ರೇಬಿಸ್ ದಿನವು ಜಗತ್ತಿನ ಅತ್ಯಂತ ದೊಡ್ಡ ಜಾಗೃತಿ ಕಾರ್ಯಕ್ರಮವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮುಂದಾಳತ್ವದಲ್ಲಿ ಪ್ರತಿವರ್ಷ ಏಪ್ರಿಲ್ನಿಂದಲೇ ಇದರ ಸಿದ್ಧತೆ ಆರಂಭವಾಗುತ್ತದೆ. ಆ ವರ್ಗದ ಘೋಷವಾಕ್ಯ (ಥೀಮ್)ವನ್ನು ರೂಪಿಸುವುದರೊಂದಿಗೆ ಸಿದ್ಧತೆಗೆ ಚಾಲನೆ ನೀಡಲಾಗುತ್ತದೆ. ''ರೇಬಿಸ್ ಕೊನೆಗಾಣಿಸಿ: ಸಹಯೋಗ ನೀಡಿ, ಲಸಿಕೆ ಹಾಕಿಸಿಕೊಳ್ಳಿ'' ಎನ್ನುವುದು ಈ ವರ್ಗದ ಧ್ಯೆಯವಾಕ್ಯವಾಗಿದೆ.
ರೇಬಿಸ್ನಿಂದ ಸಾವೀಗೀಡಾಗುವ ಮಕ್ಕಳಲ್ಲಿ ಹೆಚ್ಚಿನವರು 5ರಿಂದ 13 ವರ್ಗದೊಳಗಿನ ಮಕ್ಕಳು. ಶ್ವಾನಗಳ ಜತೆ ಆಟವಾಡುವುದು, ಅವುಗಳ ವರ್ತನೆ ಗೊತ್ತಿಲ್ಲದೇ ಕೆಣಕಲು ಹೋಗಿ ಕಚ್ಚಿಸಿಕೊಳ್ಳುವುದು ಮುಖ್ಯ ಕಾರಣ. ಹೀಗಾಗಿ ಶ್ವಾನಗಳ ವರ್ತನೆ ಮತ್ತು ಆಂಗಿಕ ಭಾಗ (ಸಿಟ್ಟು, ಹತಾಶೆ, ಸ್ನೇಹದ ವರ್ತನೆ) ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿದೆ. ರೇಬಿಸ್ ಕುರಿತು ಅರಿವು ಮೂಡಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 'ರಾಷ್ಟ್ರೀಯ ರೇಬಿಸ್ ನಿಯಂತ್ರಣ ಯೋಜನೆ' ರೂಪಿಸಿದೆ ಎಂದು ಪಶುಗಳಿಂದ ಹರಡುವ ರೋಗಗಳು, ಅವುಗಳ ಲಕ್ಷಣಗಳು ಹಾಗೂ ಮೊನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ರೇಬಿಸ್ ಲಸಿಕೆ ಕಂಡು ಹಿಡಿದಂತಹ ವಿಜ್ಞಾನಿ ಲೂಯಿಸ್ ಫ್ಯಾಶ್ಚರ ಹಾಗೂ ರೇಬಿಸ್ ಕುರಿತು ಬಸವರಾಜ ಸಜ್ಜನ ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಾಲೆಯ ಮುಖ್ಯೋಪಾಧ್ಯಾಯ ಅನಿಲಕುಮಾರ ರಾಠೋಡ ಪ್ರಾಸ್ತಾವಿಕ ಮಾತನಾಡಿ ಲಸಿಕೆ ಕಂಡುಹಿಡಿದು ಅನೇಕ ಜೀವಗಳನ್ನು ಉಳಿಸಿದ ಲೂಯಿಸ್ ಫ್ಯಾಶ್ಚರನಂತೆ ಮಕ್ಕಳು ಸಾಧನೆ ಮಾಡುವಂತೆ ಸಾಧನೆಯ ಹಾದಿಯಲ್ಲಿ ಮಕ್ಕಳು ಗುಣಮಟ್ಟ ಶಿಕ್ಷಣ ಪಡೆದು ದೇಶದ ಅತ್ಯುನ್ನತ ಹುದ್ದೇಗಳನ್ನು ಅಲಂಕರಿಸುವ ಮೂಲಕ ಹೆತ್ತವರ ಗುರುಗಳ ಕೀರ್ತಿ ತರುವಂತವರಾಗಬೇಕು ಎಂದರು.
ಗೋಗ್ರೀನ್ ಕಾರ್ಯಕ್ರಮದಲ್ಲಿ ಮಕ್ಕಳಿಂದ 25 ವರ್ಷದ ಹಳೆಯದಾದ ಮರಗಳ ಬೀಜಗಳ ತರಿಸಿ, ಸಾವಯವ ಗೊಬ್ಬರ ಹಾಗೂ ಮಣ್ಣಿನಿಂದ ಬೀಜದ ಉಂಡೆ ತಯಾರಿಸಿ ತಮ್ಮ ನೆರೆಹೊರೆಯಲ್ಲಿ ಅಥವಾ ರಸ್ತೆಗಳ ಪಕ್ಕದಲ್ಲಿ ಹರಡುವ ಪ್ರಕೃತಿಯನ್ನು ಹಸಿರಾಗಿಸುವಂತೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.