ಬೆಳಗಾವಿ

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ಜಾಥಾ

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ಜಾಥಾ


ಸವದತ್ತಿ .1: ಮಹಾತ್ಮ ಗಾಂಧೀಜಿ ಅವರ ವ್ಯಸನಮುಕ್ತ ಸಮಾಜದ ಕನಸನ್ನು ಸಾಕಾರಗೊಳಿಸುವ ಹಾಗೂ ಯುವಪೀಳಿಗೆಯನ್ನು ವ್ಯಸನಗಳಿಂದ ಮುಕ್ತಗೊಳಿಸುವ ಉದ್ದೇಶದಿಂದ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಹಾಗೂ ಜನಜಾಗೃತಿ ವೇದಿಕೆ ವತಿಯಿಂದ ಅ.7ರಂದು ಸವದತ್ತಿ ನಗರದಲ್ಲಿ ಜನಜಾಗೃತಿ ಜಾಥಾ ಹಾಗೂ ಪಾನಮುಕ್ತರ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಚ್‌.ಆರ್‌. ಲವಕುಮಾರ್ ತಿಳಿಸಿದರು.  

ನಗರದ  ಧರ್ಮಸ್ಥಳ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ನಿರಂತರವಾಗಿ ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗುತ್ತಿದೆ. ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗೋಕಾಕ, ಯರಗಟ್ಟಿ, ಸವದತ್ತಿ ಹಾಗೂ ರಾಮದುರ್ಗ ತಾಲೂಕುಗಳಲ್ಲಿ ಇದುವರೆಗೆ 36 ಮದ್ಯವರ್ಜನ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಶಿಬಿರಗಳ ಮೂಲಕ 3,250 ಶಿಬಿರಾರ್ಥಿಗಳು ಮದ್ಯಪಾನದಿಂದ ಸಂಪೂರ್ಣ ದೂರವಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದರು.  

ಜನಜಾಗೃತಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸೋಮಶೇಖರ್ ಮಗದುಮ್ಮ ಮಾತನಾಡಿ, ಯುವಪೀಳಿಗೆ ವಿವಿಧ ದುಶ್ಚಟಗಳಿಗೆ ಬಲಿಯಾಗದಂತೆ ಶಾಲಾ-ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಮಾದಕ ವಸ್ತು ವಿರೋಧಿ ದಿನಾಚರಣೆ ಹಾಗೂ ವಿಶ್ವ ತಂಬಾಕು ವಿರೋಧಿ ದಿನಾಚರಣೆಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ. ಇದುವರೆಗೆ 384 ಕಾರ್ಯಕ್ರಮಗಳನ್ನು ನಡೆಸಿ 20,535 ವಿದ್ಯಾರ್ಥಿಗಳಲ್ಲಿ ವ್ಯಸನಮುಕ್ತಿಯ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.  

ತಾಲೂಕು ಯೋಜನಾಧಿಕಾರಿ ಸುಬ್ರಾಯ ನಾಯ್ಕ, ಜನಜಾಗೃತಿ ವೇದಿಕೆ ಸದಸ್ಯರಾದ ಪ್ರವೀಣ ಪಟ್ಟಣಶೆಟ್ಟಿ, ಮಹಾಂತೇಶ ಕಾಜಗಾರ, ಈಶ್ವರ ಕರಿಕಟ್ಟಿ, ಪಂಚವ್ವ ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ