ಡಾ.ಅಂಬೇಡ್ಕರ್ ನಾಮಫಲಕಕ್ಕೆ ಅವಮಾನ ಖಂಡಿಸಿ ಪ್ರತಿಭಟನೆ
ಮುದ್ದೇಬಿಹಾಳ 11: ಇಂಡಿ ತಾಲೂಕು ಮಾರ್ಸನಳ್ಳಿಯಲ್ಲಿ ಡಾ.ಅಂಬೇಡ್ಕರ್ ನಾಮಫಲಕಕ್ಕೆ ಅವಮಾನ ಘಟನೆ ಖಂಡಿಸಿ ಇಲ್ಲಿನ ದಲಿತಪರ, ಪ್ರಗತಿಪರ ಸಂಘಟನೆಗಳ ನೂರಾರು ಸದಸ್ಯರು ಪಟ್ಟಣದಲ್ಲಿ ಗುರುವಾರ ಹಲಗೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ನಂತರ ಸಂಗೊಳ್ಳಿ ರಾಯಣ್ಣ, ಬಸವೇಶ್ವರ ವೃತ್ತ, ಕಿತ್ತೂರು ಚನ್ನಮ್ಮ ವೃತ್ತ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ಆಗಮಿಸಿತು.
ಮಾರ್ಗ ಮಧ್ಯೆ ಬಸವೇಶ್ವರ ವೃತ್ತದಲ್ಲಿ ಹಾಗೂ ಮಿನಿ ವಿಧಾನಸೌಧ ಎದುರು ಪ್ರತಿಭಟನಾನಿರತರನ್ನುದ್ದೇಶಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ.ಮುದೂರ, ಬಹುಜನ ಸಮಾಜ ಪಕ್ಷದ ಜಿಲ್ಲಾ ಉಸ್ತುವಾರಿ ಕೆ.ಬಿ.ದೊಡಮನಿ ವಕೀಲರು, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಪುತ್ರ ಅಜಮನಿ, ಜಿಲ್ಲಾ ಸಂಚಾಲಕರಾದ ಚನ್ನಪ್ಪ ವಿಜಯಕರ್, ಹರೀಶ ನಾಟೀಕಾರ, ದಲಿತ ಸಂಘಟನೆಗಳ ಮುಖಂಡರಾದ ಬಸವರಾಜ ಪೂಜಾರಿ, ದೇವರಾಜ ಹಂಗರಗಿ ಮತ್ತಿತರರು ಮಾತನಾಡಿ ಘಟನೆಯನ್ನು ಉಗ್ರವಾಗಿ ಖಂಡಿಸಿದರು. .
ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಂಡು ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಪೊಲೀಸ್ ಇಲಾಖೆ ರಾಜಕೀಯ ಪ್ರಭಾವಕ್ಕೆ ಒಳಗಾಗದೆ, ಮೀನಮೇಷ ಎಣಿಸದೆ ಆರೋಪಿಗಳು ಯಾರೇ ಆಗಿದ್ದರೂ ಬಂಧಿಸಬೇಕು. ವಿಳಂಬ ಮಾಡಿದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ವಿವಿಧ ಸಂಘಟನೆಗಳ ಪ್ರಮುಖರಾದ ಭಗವಂತ ಕಬಾಡೆ, ಅಶೋಕ ಇರಕಲ್, ಸಂಗಮೇಶ ನಾಲತವಾಡ, ಬಾಲಚಂದ್ರ ಹುಲ್ಲೂರ, ತಿಪ್ಪಣ್ಣ ಗೋನಾಳ, ಪ್ರಕಾಶ ಚಲವಾದಿ, ಸಂತೋಷ ಅಜಮನಿ, ಮಲ್ಲು ತಳವಾರ, ಕರ್ನಾಟಕ ಮಾದಿಗರ ಸಂಘದ ತಾಲೂಕು ಅಧ್ಯಕ್ಷ ಶೇಖರ ಮಾದರ, ಹಣಮಂತ ಗುಂಡಕರ್ಜಗಿ, ಪರಸಪ್ಪ ಮಾದರ, ಮಹಾಂತೇಶ ಬಾಗಲಕೋಟ, ರಾಜು ಚಲವಾದಿ, ತನ್ವೀರ ಮಕಾನದಾರ, ಖಯ್ಯೂಮ್ ಚೌಧರಿ, ರಾವುತಪ್ಪ ಮಾದರ, ಹಣಮಂತ ಚಿರ್ಚನಕಲ್, ಮಂಜುನಾಥ ಮಾದರ, ಯಲ್ಲಪ್ಪ ಚಲವಾದಿ, ಜೆ.ಬಿ.ಚಲವಾದಿ ಸೇರಿದಂತೆ ಹಲವರು ಇದ್ದರು.