ಶೀಘ್ರದಲ್ಲಿ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಸಿಂದಗಿ31: ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆಗೆ ಶೀಘ್ರದಲ್ಲಿ ನೀರು ಹರಿಸುವ ಮೂಲಕ ಒಣಗುತ್ತಿರುವ ಬೆಳೆಗಳನ್ನು ಉಳಿಸುವ ಮೂಲಕ ರೈತ ಬದುಕು ರಕ್ಷಣೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ನೇತೃತ್ವದಲ್ಲಿ ಇಂಡಿ-ಸಿಂದಗಿ ತಾಲೂಕಿನ ರೈತರು ಸೋಮವಾರ ತಾಲೂಕಿನ ರಾಂಪೂರ ಪಿ.ಎ. ಗ್ರಾಮದಲ್ಲಿನ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಕೆನಾಲ್ ಝೇನ್ ರಾಂಪೂರ-2 ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಪ್ರತಿಭಟನಾ ನಿರತ ರೈತರು ಅಧೀಕ್ಷಕ ಅಭಿಯಂತರ ರಾಜೇಶ ಚವ್ಹಾಣ ಅವರಿಗೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ ಕಾಂಗ್ರೆಸ್ ಮುಖಂಡ ಮಾತನಾಡಿ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಯಂತ್ರಗಳು ಕೆಟ್ಟು ಹೋಗಿದ್ದು ಇನ್ನೂ ದುರಸ್ತಿಯಾಗಿಲ್ಲ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯಿಂದ 41ಸಾವಿರ ಹೆಕ್ಟೇರ ಪ್ರದೇಶಕ್ಕೆ ನೀರುಣಿಸಲಾಗುತ್ತಿದೆ. ಅದರಲ್ಲಿ ಸಿಂದಗಿ ಮತ್ತು ಇಚಿಡಿ ತಾಲೂಕಿನ ರೈತರ ಜಮೀನುಗಳು ನೀರುಣಿಸಲಾಗುತ್ತಿದೆ. ಆದರೆ ಇಂದು ಯಂತ್ರಗಳು ಕೆಟ್ಟಿದ್ದರಿಂದ, ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದ ಕಾಲುವೆಗೆ ನೀರು ಹರಿಯುತ್ತಿಲ್ಲ. ಇದರಿಂದ ಸದ್ಯ ರೆತರಲ್ಲಿ ಆತಂಕ ಮನೆ ಮಾಡಿದೆ ಎಂದು ಆರೋಪಿಸಿದರು.
ತಾಪಂ ಮಾಜಿ ಸದಸ್ಯ ಸುರೇಶ ಪೂಜಾರಿ ಮಾತನಾಡಿ, ಸಾಮಾನ್ಯವಾಗಿ ದುರಸ್ತಿ ಕಾರ್ಯಗಳನ್ನು ಬೇಸಿಗೆಯಲ್ಲಿ ಮಾಡಿ ಮುಗಿಸಿ ಜೂನ್ ತಿಂಗಳಲ್ಲಿ ಕಾಲುವೆಗೆ ನೀರು ಹರಿಸಲು ಸಜ್ಜುಗೊಳಿಸಲಾಗುತ್ತದೆ. ಮುಂಚಿತವಾಗಿ ಯಂತ್ರ ದುರಸ್ತಿ ಕೆಗೆತ್ತಿಕೊಳ್ಳದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ದುರಸ್ತಿ ಮಾಡಿ ಕಾಲುವೆಗೆ ನೀರು ಹರಿಸುವದು ಯಾವಾಗ ಎಂಬುದು ರೆತರ ಆಕ್ರೋಶ ಎಂದು ಆಕ್ರೋಶ ವ್ಯಕ್ತ ಪಡೆಸಿದರು.
ಕಾಂಗ್ರೆಸ್ ಮುಖಂಡರಾದ ಎಂ.ಎ. ಖತಿಬ, ಮುರಗೆಪ್ಪ ರದ್ದೆವಾಡಗಿ, ವಾಯ್.ಸಿ. ಮಯೂರ ಮಾತನಾಡಿ, ಜಾಕವೆಲ್ ವಾರ್ಷಿಕ ನಿರ್ವಹಣೆಗಾಗಿ ನಿಗಮವು ಕೋಟ್ಯಂತರ ರೂ.ಗುತ್ತಿಗೆ ನೀಡುತ್ತದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಿರ್ವಹಣೆ ಮಾಡದೇ ಹಣ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಕ್ಷೇತ್ರದ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಸಂತೋಷ ಹರನಾಳ, ಭೀಮರಾಯ ಅಮಗೋಳ, ಪರಶುರಾಮ ಕುಂಬಾರ, ಬಿ.ಎಸ್. ಬೂದಿಹಾಳ, ಪಿ.ಎಸ್. ಅಡಗಲ್, ಐ.ಜಿ. ಬಿರಾದಾರ, ಗೋಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ಎಂ.ಎಚ್. ಹಳೆಮನಿ ಸೇರಿದಂತೆ ಗಣಿಹಾರ, ತಾಂಬಾ, ಸಿಂದಗಿ, ಯರಗಲ್ ಬಿ.ಕೆ. ಸೇರಿದಂತೆ ವಿವಿಧ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.