ಡಿಗ್ರಿ ಕಾಲೇಜು ಪ್ರಾರಂಭಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 22: ತಾಲೂಕಿನ ತಂಬ್ರಹಳ್ಳಿ ಎಬಿಟಿಎಂ ಪಿಯುಸಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಗ್ರಾಮದಲ್ಲಿ ಡಿಗ್ರಿ ಕಾಲೇಜು ಪ್ರಾರಂಭಿಸುವಂತೆ ಒತ್ತಾಯಿಸಿ ಗ್ರಾಮದ ಕೊಟ್ಟೂರೇಶ್ವರ ದೇವಾಲಯದ ಮುಂದೆ ರಾಷ್ಟ್ರಪತಿ ಹಾಗೂ ಪ್ರಧಾನಿಗೆ ರವಾನಿಸುತ್ತಿರುವ ಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಹೋರಾಟ ಸಮಿತಿಯ ಸಂಚಾಲಕ ಅಕ್ಕಿ ತೋಟೇಶ್ ಮಾತನಾಡಿ ತಂಬ್ರಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಪದವಿ ಓದುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ಸರಕಾರ ಇತ್ತ ಗಮನ ಹರಿಸಿ ಕೂಡಲೇ ಡಿಗ್ರಿ ಕಾಲೇಜು ಆರಂಭಿಸುವ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಶಿಕ್ಷಣಕ್ಕೆ ಒತ್ತು ನೀಡುವಂತೆ ಪತ್ರ ಚಳುವಳಿ ಮೂಲಕ 6ಸಾವಿರ ಪತ್ರಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ರವಾನಿಸಲಾಗಿದೆ, ವಿದ್ಯಾರ್ಥಿಗಳು ಸೇರಿದಂತೆ , ಗ್ರಾಮದ ಗ್ರಾಮಸ್ಥರು ಮತ್ತು ಆಸುಪಾಸಿನ ಗ್ರಾಮಸ್ಥರು ಡಿಗ್ರಿ ಕಾಲೇಜಿಗೆ ಒತ್ತಾಯಿಸಿ ವಿಜಯನಗರ ಜಿಲ್ಲೆಗೆ ಪಾದಯಾತ್ರೆ ಹಮ್ಮಿಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸರಕಾರ ಕೂಡಲೇ ತಂಬ್ರಹಳ್ಳಿಯಲ್ಲಿ ಡಿಗ್ರಿ ಕಾಲೇಜು ಆರಂಭಿಸಿ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ನೆರವಾಗಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿನಿಯರು ಪಿಯುಸಿ ಹಂತಕ್ಕೆ ಶಿಕ್ಷಣವನ್ನು ಮುಗಿಸಿ, ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ. ತಂಬ್ರಹಳ್ಳಿಯಲ್ಲಿ ಡಿಗ್ರಿ ಕಾಲೇಜನ್ನು ಇದೇ ಶೈಕ್ಷಣಿಕ ವರ್ಷದಿಂದ ಸರಕಾರ ಆರಂಭಿಸದಿದ್ದರೆ ಪುನಃ ಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಆನೇಕಲ್ ದೊಡ್ಡಬಸಪ್ಪ, ಸದಸ್ಯ ಸಂಡೂರು ಮೆಹಬೂಬ್, ನಿವೃತ್ತ ಇಒ ಟಿ.ವೆಂಕೋಬಪ್ಪ, ಕಸಾಪ ಅಧ್ಯಕ್ಷ ಎಸ್.ವಿ.ಪಾಟೀಲ್, ಪಟ್ಟಣಶೆಟ್ಟಿ ಸುರೇಶ, ಗೌರಜ್ಜನವರ ಗೀರೀಶ್, ದೇವಿಪ್ರಸಾದ, ಹೊಟ್ಟಿ ವೀರಣ್ಣ ಇತರರಿದ್ದರು. ದೇಶದ ರಾಷ್ಟ್ರಪತಿಗೆ ಹಾಗೂ ಪ್ರಧಾನಿಗೆ ಕಾಲೇಜು ವಿದ್ಯಾರ್ಥಿಗಳು 2ಸಾವಿರ ಪತ್ರಗಳನ್ನು ಹಾಕಿ ಡಿಗ್ರಿ ಕಾಲೇಜಿಗೆ ಒತ್ತಾಯಿಸಿದರು.