ಜೊಂಡಲಗಟ್ಟಿ ಗ್ರಾಮಕ್ಕೆ ಬಸ್ ಸಂಚಾರ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕಾರ್ಯಕರ್ತರು
ಶಿಗ್ಗಾವಿ 28:ತಾಲೂಕಿನ ಜೊಂಡಲಗಟ್ಟಿ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಸಂಚಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕಾರ್ಯಕರ್ತರು ತಡಸ-ಶಿಕಾರಿಪುರ ರಸ್ತೆ ತಡೆದು ಅರಟಾಳ ಕ್ರಾಸ್ ಬಳಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಕೊನೆ ಗ್ರಾಮವಾಗಿರುವ ಜೊಂಡಲಗಟ್ಟಿ ಗ್ರಾಮಕ್ಕೆ ಕಳೆದ ಮೂರುನಾಲ್ಕು ವರ್ಷದಿಂದ ಸಂಚರಿಸುತ್ತಿದ್ದ ಬಸ್ ಸಂಚಾರ ದಿಢೀರ್ ಸ್ಥಗಿತಗೊಳಿಸಿ ಈ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ನಿಣಜಿಥಿ ಶಾಲಾ-ಕಾಲೇಜಗೆ ಹೋಗುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ ಎಂದು ಸಾರಿಗೆ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಆಸ್ಪತ್ರೆ ಸೇರಿದಂತೆ ಇತರೇ ವ್ಯಾಪಾರ ವಹಿವಾಟುಗಳಿಗೆ ನಿತ್ಯ ಶಿಗ್ಗಾವಿ ಪಟ್ಟಣ ತಡಸ ಗ್ರಾಮಕ್ಕೆ ಹೋಗುವ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿದೆ. ಈ ಮಾರ್ಗ ಸಂಚರಿಸುವ ಬಸ್ಗಳಿಂದ ಸಾರಿಗೆ ಇಲಾಖೆಗೆ ಆದಾಯವಿದ್ದರೂ ಸ್ಥಗಿತಗೊಳಿಸಿದ್ದು ಯಾವ ಪುರಷಾರ್ಥಕ್ಕೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಕೂಡಲೇ ಸಾರಿಗೆ ಅಧಿಕಾರಿಗಳು ಮೊದಲಿನಂತೆ ಸಾರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಇಲ್ಲವಾದಲ್ಲಿ ಉಗ್ರವಾದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸಂತೋಷ ಹಿರೇಮಠ, ಸಿಪಿಐ ಸುರೇಶ ಕುಂಬಾರ, ತಡಸ ಪಿಎಸ್ಐ ಆನಂದ ನಾಯ್ಕ, ಸವಣೂರ ಡಿಪೋ ಘಟಕದ ವ್ಯವಸ್ಥಾಪಕರು ಕೂಡಲೇ ಬಸ್ ಸಂಚಾರ ಆರಂಭ ಮಾಡುವ ಭರವಸೆ ನೀಡಿದ ಬಳಿಕ ಜಿಲ್ಲಾಧ್ಯಕ್ಷ ಮಂಜುನಾಥ ಕೊಟ್ಟ ಭರವಸೆಯಂತೆ ಬಸ್ ಸಂಚಾರ ಕೈಗೊಳ್ಳದಿದ್ದರೇ ಉಗ್ರವಾದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ಪ್ರತಿಭಟನೆಯಿಂದ ಹಿಂತಿರುಗಿದರು.
ಪ್ರತಿಭಟನೆಯಿಂದ ಒಂದು ಗಂಟೆ ಸಾರಿಗೆ ಅಸ್ತವ್ಯವಸ್ತಗೊಂಡಿತು. ತಾಲೂಕ ಅಧ್ಯಕ್ಷ ಶಂಕರ ಬಡಿಗೇರ, ಸಿದಯ್ಯ ಹಿರೇಮಠ, ಜಬ್ಬರಖಾನ್ ಪಠಾಣ, ರಾಮು ಗೌಳಿ, ಹನಮಂತಪ್ಪ ಮಟ್ಟಿಮನಿ, ಅಜ್ಜೇಸಾಬ ನದಾಫ್, ಲಿಲಾವತಿ ಪಡತಾರೆ, ಗುಡ್ಡಪ್ಪ ಮ್ಯಾಗಿನಮನಿ, ವೆಂಕಟೆಶ ಇಂಗಳೆ, ನಾರಾಯಣ ಬಡಿಗೇರ, ಮಹವೀರ ಹಳ್ಳಿ, ಮಹ್ಮದ ಇಂಗಳಿಗಿ, ದಾವಲಸಾಬ ಸಿಖಂದರ, ಈರಣ್ಣ ಬೋಸಲೆ, ಮಾರುತಿರಾವ್ ಪಾಟೀಲ, ಗಂಗಾರಾವ್ ಜೊರೆ, ಶಿವಾಜಿರಾವ್ ಬೋಸಲೆ, ವಿಠಲ ನಲವಡಿ, ಬಸವರಾಜ ಕುರಬರ, ರಮೇಶ ಪಾಟೀಲ, ಶಶಿಕಲಾ ಗೌಳಿ, ಸಾವಿತ್ರಿ ನಿಂಬಾಲಕರ, ಅಕ್ಕಮ್ಮ ಗೌಳಿ ಸೇರಿದಂತೆ ಅನೇಕರಿದ್ದರು.