ಪ್ರಾಣವುಳಿಸುವ ವೈದ್ಯರ ಪ್ರಾಣಕ್ಕೆ ಸಂಚಕಾರ: ಸರಕಾರಕ್ಕೆ ಸ್ಥಳೀಯ ವೈದ್ಯರ ಸಂಘದಿಂದ ಮನವಿ.
ಮಹಾಲಿಂಗಪುರ 19: ವೈದ್ಯ ಸಮೂಹವೆಲ್ಲ ತಮ್ಮ ಪ್ರಾಣದ ಹಂಗು ತೊರೆದು ರೋಗಿಗಳ ಪ್ರಾಣ ಉಳಿಸಲು ಹೆಣಗಾಡುತ್ತಾರೆ, ಇಂದು ಅಂತಹವರ ಪ್ರಾಣಕ್ಕೇನೇ ಸಂಚಕಾರ ಬಂದೋದಗಿರುವುದು ಕಳವಳಕಾರಿ ವಿಷಯವಾಗಿದೆ ಎಂದು ಸ್ಥಳೀಯ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ವಿಜಯ ಹಂಚಿನಾಳ ತಿಳಿಸಿದರು.
ಪಟ್ಟಣದ ಪುರಸಭೆಗೆ ಪ್ರಧಾನಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಪುರಸಭೆಯ ವ್ಯವಸ್ಥಾಪಕ ರಾಘವೇಂದ್ರ ನಡುವಿನಮನಿ ಅವರಿಗೆ ನೀಡಿ ಮಾತನಾಡಿದರು.
ಇತ್ತೀಚೆಗೆ ದೇಶಾದ್ಯಂತ ವೈದ್ಯರುಗಳ ಮೇಲೆ ಹಲ್ಲೆ ಮತ್ತು ದಬ್ಬಾಳಿಕೆಯಂತಹ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿ, ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ವೈದ್ಯರು ಸಿಗುವುದು ಕಠಿಣವೆಂದು ತಿಳಿಸಿದರು.
ಎಚ್.ಡಿ.ರೇವಣ್ಣರ ದಬ್ಬಾಳಿಕೆಯ ಹೇಳಿಕೆ ಖಂಡಿಸಿ ಜಾಗತಿಕ ಪಿಡುಗುಗಳ ಸಮಯ ಹಾಗೂ ಹತ್ತು ಹಲವಾರು ಕೊರತೆಗಳ ನಡುವೆಯೂ ಪ್ರಾಣ ಉಳಿಸುವ ಯತ್ನ ವೈದ್ಯರದಾಗಿರುತ್ತದೆ. ಆದರೆ ವಿಧಿವಶಾತ ಸಾವು ಸಂಭವಿಸಿದ್ರೇ ಸಾಕು, ರೋಗಿಯ ಕಡೆಯವರು ನಮ್ಮ ಮೇಲೆ ಮಾನವೀಯತೆಯನ್ನೇ ಮರೆತು ಹಲ್ಲೆಗೆ ಮುಂದಾಗುತ್ತಾರೆ. ಈ ಕಾರಣದಿಂದ ದೇಶಾದ್ಯಂತ ವೈದ್ಯ ಸಮೂಹದಲ್ಲಿ ಆತಂಕದ ಛಾಯೆ ಮೂಡುತ್ತಿದ್ದು, ವೈದ್ಯರಿಗೆ ಮತ್ತು ಸಿಬ್ಬಂದಿಗಳ ರಕ್ಷಣೆಗೆ ಆಸ್ಪತ್ರೆಗಳಿಗೆಯೇ ವಿಶೇಷ ರಕ್ಷಣಾ ಕಾನೂನು ತರಬೇಕೆಂದು ಘನ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಮಾಡಿದರು.
ಡಾ.ಮಾರುತಿ ಮೇದಾರ ಮಾತನಾಡುತ್ತಾ ಕೋವಿಡ್ ಸಂದರ್ಭ, ದೇಶದಲ್ಲಿ 1700, ನಮ್ಮರಾಜ್ಯ ಒಂದರಲ್ಲಿಯೇ 600 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟಾದರೂ ಜೀವ ಕಾಪಾಡುವ ಇವರ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದು ಮಾತ್ರ ವೈದ್ಯ ಸಮೂಹದ ಆತ್ಮಸ್ಥೈರ್ಯ ಕುಗ್ಗುವಂತೆ ಮಾಡಿದೆ.
ಆದ್ದರಿಂದ ಹಲ್ಲೆಕೋರರ ಮೇಲೆ ಉಗ್ರ ಕ್ರಮ ಜರುಗಿಸುವ ಕಾನೂನು ಮತ್ತು ವೈದ್ಯರಿಂದಲೂ ಅಚಾತುರ್ಯ ಜರುಗಿದರೆ ಅದಕ್ಕೂ ಸರಕಾರ ಸೂಕ್ತ ಕ್ರಮ ಜರುಗಿಸಲಿ. ಒಟ್ಟಾರೆ ವೈದ್ಯರು ಹಾಗೂ ಸಾರ್ವಜನಿಕರಲ್ಲಿ ಭದ್ರತೆ, ಸುರಕ್ಷತೆ ಹಾಗೂ ವಿಶ್ವಾಸದ ವಾತಾವರಣ ನಿರ್ಮಾಣವಾಗಲಿ ಎಂದರು.
ಡಾ. ಅಶೋಕ ದಿನ್ನಿಮನಿ, ಡಾ. ಸಂಜಯ ಮುರಗೋಡ, ಡಾ.ಎಂ.ಎಸ್.ಚನ್ನಾಳ, ಡಾ. ಜಬ್ಬಾರ ಯಕ್ಸಂಬಿ, ಡಾ. ಬಿ.ಡಿ.ಬಾಳಿಗಿಡದ, ಡಾ.ವಿ.ಎಸ್.ಮಮದಾಪೂರ, ಡಾ.ಗುಂಡಪ್ಪ, ಡಾ.ಪ್ರಭುದೇವ ಅಂದಾನಿ, ಡಾ.ಮಂಜುನಾಥ ಚನ್ನಾಳ, ಡಾ.ಅನುಪಮಾ ಅರಿಷಿಣಗೋಡಿ, ಡಾ.ಮಹಾಂತೇಶ ಯಂಕಚ್ಚಿ, ಡಾ.ವೆಂಕಟೇಶ ಬುರುಡ, ಡಾ.ಪ್ರಭಾಕರ ಕುಳ್ಳೊಳ್ಳಿ, ಡಾ.ಪವನಕುಮಾ ಸೋರಗಾಂವಿ ಇದ್ದರು.