ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಶಿಗ್ಗಾವಿ 21: ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಶಿಗ್ಗಾವಿ ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಭಾ.ಜ.ಪ ಮಂಡಳದ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಣಿ ಚನ್ನಮ್ಮ ವೃತ್ತದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ದ ದಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭಾಜಪ ತಾಲೂಕ ಮಂಡಲ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ವಾರಂಟಿ ಇಲ್ಲದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಕಾಂಗ್ರೇಸ್ ಸರ್ಕಾರ ಅಗತ್ಯ ವಸ್ತುಗಳ ದರ ಹೆಚ್ಚಿಸುತ್ತಿದೆ. ಅದರಲ್ಲೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿರುವುದು ಜನಸಾಮಾನ್ಯರ ಜೊತೆಗೆ ರೈತರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಇದು ಸರಿಯಾದ ಕ್ರಮವಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗಲೆಲ್ಲ ರೈತರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕಳೆದ ವರ್ಷದ ಬರಗಾಲದಿಂದ ತತ್ತರಿಸಿರುವ ರೈತನಿಗೆ ಈಗಿನ ಮುಂಗಾರುಘಟ್ಟನಿಗೆ ಉಚಿತವಾಗಿ ಬೀಜಗಳನ್ನು ಪೂರೈಕೆ ಮಾಡಿ ರೈತನಿಗೆ ನೆರವಾಗಬೇಕಾಗಿತ್ತು ಆದರೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಜೊತೆಗೆ ಬೀಜ ಗೊಬ್ಬರಗಳ ಬೆಲೆ ಏರಿಸಿ, ಈಗ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿ ಸಂಪೂರ್ಣ ಜನ ವಿರೋಧಿ ನೀತಿಯ ಆಡಳಿತವನ್ನು ರಾಜ್ಯದಲ್ಲಿ ನಡೆಸುತ್ತಿದ್ದಾರೆ ಸರ್ಕಾರ ಇದೇ ನೀತಿ ಮುಂದುವರಿಸಿದರೆ ಜನ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡ ಶಶಿಧರ ಯಲಿಗಾರ ಮಾತನಾಡಿ, ರಾಜ್ಯ ಕಾಂಗ್ರೇಸ್ ಸರಕಾರದ ಬಿಟ್ಟಿ ಭಾಗ್ಯಗಳನ್ನು ಜನತೆ ಒಪ್ಪಕೊಂಡಿಲ್ಲ, ಅದು ಕಳೆದ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಿದೆ, ಸಿಎಂ ಸಿದ್ದರಾಮಯ್ಯ ಬೇರೆ ರಾಜ್ಯಗಳ ಉದಾಹರಣೆ ನೀಡಿ ನಾವು ಏರಿಸಿದ ಬೆಲೆ ಹೆಚ್ಚೇನು ಇಲ್ಲ ಎಂದು ಹೇಳುತ್ತಾರೆ, ಆದರೆ ಬಿಜೆಪಿ ಸರಕಾರದ ರಾಜ್ಯಗಳಲ್ಲಿ ಬೆಲೆ ಕಡಿಮೆ ಇದೆ ಇದು ಸಿಎಂ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು, ಭಾಗ್ಯಗಳ ದುಡ್ಡು ಹೊಂದಾಣಿಕೆಗೆ ಈ ರೀತಿ ಬೆಲೆ ಏರಿಕೆ ಮಾಡಿ ಜನರ ಮೇಲೆ ಹೊರೆ ಹಾಕುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಶಿವಪ್ರಸಾದ ಸುರಗೀಮಠ, ಜೆಡಿಎಸ್ ತಾಲೂಕಾದ್ಯಕ್ಷ ಈರಣ್ಣ ನವಲಗುಂದ, ಸಂತೋಷ ಆಲದಕಟ್ಟಿ, ಶಶಿಧರ ಹೊನ್ನಣ್ಣವರ, ರೇಣುಕನಗೌಡ ಪಾಟೀಲ, ಡಾ. ಮಲ್ಲೇಶಪ್ಪ ಹರಿಜನ, ಪರಶುರಾಮ್ ಸೊನ್ನದ್, ಬಸನಗೌಡ ಮೇಲನಮನಿ, ಸುಭಾಸ್ ಚೌಹಾಣ್, ಮಂಜುನಾಥ ಬ್ಯಾಹಟ್ಟಿ, ಸೊಮಯ್ಯ ಗೌರಿಮಠ, ಕರಿಯಪ್ಪ ಕಟ್ಟಿಮನಿ, ಸಂಜೀವ ಮಣ್ಣಣ್ಣವರ, ಹನುಮಂತಪ್ಪ ಮಾದರ, ಕಾಶೀನಾಥ ಕಳ್ಳಿಮನಿ, ಮುತ್ತು ಯಲಿಗಾರ, ಸಂತೋಷ ದೊಡ್ಡಮನಿ, ಸಚೀನ ಮಡಿವಾಳರ, ಚೇತನ ಕಲಾಲ್, ಕಿರಣ ಬಡ್ಡಿ, ನಿಂಗಣ್ಣ ಮಾವೂರ, ಮಂಜು ಮಿರ್ಜಿ, ಶಿವಪ್ಪ ಗುಡ್ಡಣ್ಣವರ ಸೇರಿದಂತೆ ಬಿಜೆಪಿ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.