ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ
ಬಳ್ಳಾರಿ 08: ಕೇಂದ್ರ ಬಿಜೆಪಿ ಸರ್ಕಾರವು ನಿರಂತರವಾಗಿ ಅಗತ್ಯ ವಸ್ತುಗಳನ್ನು ಹೆಚ್ಚಿಸಿ ಜನಸಾಮಾನ್ಯರ ಮೇಲೆ ಬರೆ ಹಾಕುತ್ತಿದ್ದು ದಿ. 01ರಂದು ಅಡುಗೆ ಅನಿಲ(ಎಲ್ಪಿಜಿ)ದ ದರವನ್ನು 25.50 ರೂ. ಗೆ ಹೆಚ್ಚಿಸಿ ಮತ್ತೊಂದು ಆಘಾತವನ್ನು ನೀಡಿದೆ. ಬೆಲೆ ಏರಿಕೆಗಳ ದಾಳಿಗಳಿಂದ ತತ್ತರಿಸುತ್ತಿರುವ ಜನರ ಹಗಲು ದರೋಡೆಯನ್ನು ಮಾಡಲು ಜನಸಾಮಾನ್ಯರ ಜೇಬಿಗೆ ಕೈಹಾಕಿದೆ.
ಸಿಲಿಂಡರ್ ಬೆಲೆ ಏರಿಸುವುದರೊಂದಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಗಳು ಅತಿರೇಖದ ಗಡಿಯನ್ನು ದಾಟಿವೆ. ಕರೋನಾ ಎರಡನೇಯ ಅಲೆಯ ಕರಾಳ ದಿನಗಳ ಈ ಸಂದರ್ಭದಲ್ಲಿ ಜನರು ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಜೀವನವೇ ಅತಂತ್ರವಾಗಿದೆ. ಪರಿಸ್ಥಿತಿ ಹೀಗಿರುವಾಗ ಸಬ್ಸಿಡಿ ಎಲ್.ಪಿ.ಜಿ. ಅಡುಗೆ ಅನೀಲದ ಬೆಲೆಯನ್ನು 14.2 ಕೆ.ಜಿ. ತೂಕದ ಸಿಲಿಂಡರ್ ಗೆ 25.50 ರೂ. ಗೆ ಹಾಗೂ 19 ಕೆ.ಜಿ. ಸಿಲಿಂಡರ್ ಗೆ 76 ರೂ. ಗೆ ಏರಿಸಿದ ಕೇಂದ್ರ ಬಿಜೆಪಿ ಸರ್ಕಾರದ ನಡೆಯು ಜನ ವಿರೋಧಿಯಾಗಿದೆ.
ಎಲ್.ಪಿ.ಜಿ. ಯ ಅಂತರರಾಷ್ಟ್ರೀಯ ಮಾನದಂಡ ದರ, ಯು.ಎಸ್ ಡಾಲರ್ ಮತ್ತು ರೂಪಾಯಿ ವಿನಿಮಯ ದರವನ್ನು ಆಧರಿಸಿ ಸಿಲಿಂಡರ್ ದರಗಳನ್ನು ಪ್ರತಿ ತಿಂಗಳ ಆರಂಭದಲ್ಲಿಯೇ ಪರಿಷ್ಕರಿಸಲಾಗುತ್ತದೆ ಎಂದು ಹೇಳುತ್ತಾ ಜನರನ್ನು ಹಗಲು ದರೋಡೆ ಮಾಡಲು ಮಾರ್ಗಗಳನ್ನು ಹುಡುಕಿಕೊಂಡಿವೆ. ಸರ್ಕಾರವು ಕಳೆದ ಎರಡು ವರ್ಷಗಳಿಂದ ಸಬ್ಸಿಡಿಯನ್ನು ತೆಗೆದುಹಾಕಲಾಗಿದೆ. ಮೇ 2020 ರಿಂದ ಗ್ರಾಹಕರಿಗೆ ಯಾವುದೇ ಸಬ್ಸಿಡಿಯನ್ನು ಪಾವತಿಸಿಲ್ಲ. ಹೀಗಾಗಿ ಕಳೆದ ಆರು ತಿಂಗಳಲ್ಲಿ ಸಿಲಿಂಡರ್ ಬೆಲೆಯಲ್ಲಿ 140 ರೂಪಾಯಿಯಷ್ಟು ಹೆಚ್ಚಿಗೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ 592ರೂ. ಇದ್ದ ದರ 240 ರೂ. ನಷ್ಟು ಜಾಸ್ತಿಯಾಗಿದೆ.
ಈ ಬೆಲೆ ಏರಿಕೆಗಳಿಂದ ತೈಲ ಮಾಲೀಕರ, ದೊಡ್ಡ ದೊಡ್ಡ ಉದ್ಯಮಿಪತಿಗಳ, ಕಾರ್ೋರೇಟ್ ಮನೆತನಗಳಂತಹ ತಿಮಿಂಗಲುಗಳಿಗೆ ಭಾರಿ ಲಾಭವನ್ನು ಮಾಡಿಕೊಡಲಾಗುತ್ತಿದೆ. ಅಂಬಾನಿ ಅದಾನಿಗಳಂತಹ ಕಾರ್ೊರೇಟ್ ಮನೆತನಗಳಿಗೆ ಲೂಟಿ ಹೊಡೆಯಲು ಅವಕಾಶ ನೀಡಲಾಗುತ್ತಿದೆ. ಇವರುಗಳು ಲಾಭಮಾಡಿಕೊಳ್ಳಲು ಕೆಂಪು ಹಾಸಿಗೆ ಹಾಸಿ ಅವರಿಗೆ ತಲೆಬಾಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರಗಳ ಕಣ್ಣಿಗೆ ಪೊರೆ ಬಂದಿದೆ. ಜ್ವಲಂತ ಸಮಸ್ಯೆಗಳನ್ನು ಎದುರಿಸಿ ಬದುಕಲು ಹವಣಿಸುತ್ತಿರುವ ಜನತೆ ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದಾಗಲೆಲ್ಲಾ “ದೇಶಕ್ಕಾಗಿ ನೀವು ಇಷ್ಟನ್ನೂ ಮಾಡುವುದಿಲ್ಲವೇ?, ಬೆಲೆ ಹೆಚ್ಚಳದಿಂದ ದೇಶಕ್ಕೆ ಒಳ್ಳೆಯದಾಗಲಿದೆ !, ದೇಶಕ್ಕಾಗಿ ತ್ಯಾಗಮಾಡಿ !” ಎಂದು ನಾಚಿಕೆಯಿಲ್ಲದೆ ಜನತೆಯನ್ನು ಕಳ್ಳರಂತೆ ನೋಡಿಕೊಳ್ಳಲಾಗುತ್ತಿದೆ. ದೇಶದ ಜನರ ರಕ್ತ ಹೀರುತ್ತಿರುವ ಭಾರಿ ಬಂಡವಾಳವನ್ನು ಹೊಂದಿರುವ ತಿಗಣೆಗಳನ್ನೇ ದೇಶವೆಂದು ಕರೆಯಲಾಗುತ್ತಿರುವುದು ದೇಶದ ಪಾಲಿಗೆ ದುರಂತವೇ ಸರಿ.
ಕೇಂದ್ರ ಬಿಜೆಪಿ ಸರ್ಕಾರವು ಮದವೇರಿದ ಆನೆಯಂತೆ ಆಡಳಿತ ನಡೆಸುತ್ತಿದೆ. ಮುಂಚೆ ಉಚಿತವಾಗಿ ಸಿಲಿಂಡರ್ ಗಳನ್ನು ನೀಡಿ, ಸಬ್ಸಿಡಿಗಳನ್ನು ನೀಡಿ ಬಡಜನ ಪರ ಎಂದು ಅಬ್ಬರದ ಪ್ರಚಾರ ಮಾಡಿಸಿಕೊಂಡ ಕೇಂದ್ರ ಸರ್ಕಾರವು ಈ ಬೆಲೆ ಏರಿಕೆಯನ್ನು ಮಾಡಿ ಕಡು ಜನವಿರೋಧಿಯಾಗಿದೆ. ಕೇಂದ್ರ ಸರ್ಕಾರದ ಈ ಕೃತ್ಯಕ್ಕೆ ನಮ್ಮ ಪಕ್ಷ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ವಿಜಯನಗರ ಜಿಲ್ಲಾ ಸಮಿತಿಯು ಅತ್ಯುಗ್ರವಾಗಿ ಖಂಡಿಸುತ್ತದೆ ಮತ್ತು ಈ ಕೂಡಲೇ ಸಿಲಿಂಡರ್ ಬೆಲೆ ಏರಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸುತ್ತದೆ.