ಕಾರವಾರ

ಡಾ. ಬಿ.ಆರ್‌. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆ ಆಗ್ರಹ

ಡಾ. ಬಿ.ಆರ್‌. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆ ಆಗ್ರಹ

ಕಾರವಾರ 06 : ಉತ್ತರಕನ್ನಡ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಲಿಷಾ ಯಲಕಪಾಟಿ  ಶಾಸಕರಾದ  ಸತೀಶ್  ಸೈಲ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ರಾಜ್ಯದ ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಲ್ಲಿ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ.ಆರ್‌.ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಿಸಲಾಗಿರುತ್ತದೆ. ಆದರೆ 12 ತಾಲ್ಲೂಕು ಮತ್ತು ಭೌಗೋಳಿಕವಾಗಿ ವಿಸ್ತಾರವಿರುವ ಉತ್ತರಕನ್ನಡ ಜಿಲ್ಲಾ ಕೇಂದ್ರ, ಕಾರವಾರದಲ್ಲಿ ಡಾ. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಯಾಗಿಲ್ಲ.  

ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತ್ತು ಇತರೆ ಸಮುದಾಯದವರಿಗೆ ತೀವ್ರ ನೋವು ಉಂಟು ಮಾಡಿದೆ ಎಂದು ವೇದಿಕೆ ಅಸಮಾಧಾನ ವ್ಯಕ್ತಪಡಿಸಿತು.ಸಮಾಜ ಕಲ್ಯಾಣ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿ, ವಿವಿಧ ಶಿಕ್ಷಣ ಸಂಸ್ಥೆಗಳಿಗೆ,  ಉನ್ನತ ವ್ಯಾಸಂಗದ ವಿದ್ಯಾರ್ಥಿ ವೇತನಕ್ಕೆ ಕೋಟಿ ಕೋಟಿ ಹಣ  ಕೊಡಲಾಗುತ್ತದೆ.  ಇನ್ನಿತರೆ ಕಾರ್ಯಕ್ರಮಕ್ಕೆ ನೂರಾರು ಕೋಟಿ ಅನುದಾನವನ್ನು ಸರ್ಕಾರ  ಖರ್ಚು ಮಾಡುತ್ತದೆ. ಇದರಲ್ಲಿ ಕಾರವಾರ ಜಿಲ್ಲಾ ಕೇಂದ್ರದಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್ ರವರ ಪ್ರತಿಮೆ ಸ್ಥಾಪನೆ ಮಾಡುವುದು ಅಸಾಧ್ಯ ಕೆಲಸವೇನು ಅಲ್ಲ.2022-2023 ನೇ ಸಾಲಿನಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸಲು ರೂ. 25 ಲಕ್ಷ ಅನುದಾನ ಬಿಡುಗಡೆಗೆ ಸರ್ಕಾರ ಆದೇಶಿಸಿತ್ತು. ಆದರೆ, ಅನುದಾನವನ್ನು ಅಂದಿನ ಸರ್ಕಾರ  ಬಿಡುಗಡೆ ಮಾಡಿಲ್ಲ.  

ಹೊಸ ಸರ್ಕಾರ ಸಹ  ಇಲ್ಲಿಯವರೆಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ವೇದಿಕೆ ಹೇಳಿದೆ. ಉತ್ತರ ಕನ್ನಡ ಜಿಲ್ಲೆಯ ಕೇಂದ್ರಸ್ಥಾನದ ಕಾರವಾರದ ಜಿಲ್ಲಾಧಿಕಾರಿಗಳ ಕಛೇರಿ ಅವರಣದಲ್ಲಿ ಡಾ. ಆರ್‌.ಅಂಬೇಡ್ಕರ್ ರವರ ಪ್ರತಿಮೆ ನಿರ್ಮಿಸಲು ಅನುದಾನ ಬಿಡುಗಡೆ ಮಾಡಬೇಕು. ಒಂದು ವೇಳೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗದೇ ಇದ್ದಲ್ಲಿ,  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದರೆ,  ನಾವು ವಿವಿಧ ಸಂಘಟನೆಗಳು ಸೇರಿ ಸಾರ್ವಜನಿಕರಿಂದ ನೆರವು ಪಡೆದು ಪ್ರತಿಮೆ ನಿರ್ಮಿಸಲು ಸಿದ್ಧರಿದ್ದೇವೆ ಎಂದು ಪ್ರಗತಿ ಪರ ವೇದಿಕೆ ತಿಳಿಸಿದೆ. ಕಾರವಾರದಲ್ಲಿ ಡಾ.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಲು ಅನುಮತಿ ನೀಡಿ, ಸರ್ಕಾರದಿಂದ ಆದೇಶ ಹೊರಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಮನವಿ ಮಾಡಿದೆ. ಈ ಸಂದರ್ಭದಲ್ಲಿ ಅಕ್ಬರ್ ಇನಾಮದಾರ ಹಾಗೂ ಇನ್ನಿತರರು ಹಾಜರಿದ್ದರು. 


ಸುದ್ದಿ ಓದಿ