" ಹೆಣ್ಣು ಮಗು ರಕ್ಷಣೆ , ಶಿಕ್ಷಣಕ್ಕೆ ಆದ್ಯತೆ ಕೊಡಿ"
ಲೋಕದರ್ಶನ ವರದಿ
ಹೂವಿನಹಡಗಲಿ ಅ.08- ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆ ಒಂದು ಪ್ರಗತಿಪರ ಸಮಾಜದ ಎರಡು ಪ್ರಮುಖ ಕಣ್ಣುಗಳಿದ್ದಂತೆ. ಹೆಣ್ಣು ಮಗುವಿಗೆ ಶಿಕ್ಷಣ ನೀಡುವುದು ಎಂದರೆ ಒಂದು ಇಡೀ ಕುಟುಂಬ ಹಾಗೂ ದೇಶವನ್ನು ಸಬಲೀಕರಣಗೊಳಿಸಿದಂತೆ. ಹಾಗೆಯೇ, ಅವರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಗಂಗಪ್ಪ ಹೇಳಿದರು.ಹೂವಿನಹಡಗಲಿ ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಹೆಣ್ಣು ಮಕ್ಕಳ ಶಿಕ್ಷಣ, ಸುರಕ್ಷತೆ ಹಾಗೂ ಪೌಷ್ಟಿಕತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶೇಷ ಬಾಲಮೇಳ ಹಾಗೂ ’ಬೇಟಿ ಬಚಾವೋ, ಬೇಟಿ ಪಢಾವೋ’ ಮತ್ತು ಪೋಷಣ್ ಮಾಸಾಚರಣೆಯಲ್ಲಿ ಮಾತನಾಡಿದರು.
”ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯ ಬಗ್ಗೆ ಪೋಷಕರು ವಿಶೇಷ ಕಾಳಜಿ ವಹಿಸಬೇಕು. ಅಲ್ಲದೆ, ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸು ವುದರ ಜತೆಗೆ ಬಾಲ್ಯವಿವಾಹವನ್ನು ಸಂಪೂರ್ಣ ವಾಗಿ ತಡೆಗಟ್ಟಲು ಎಲ್ಲರೂ ಕೈ ಜೋಡಿಸಬೇಕು." ಎಂದರು. ಜಿಲ್ಲಾ ನಿರೂಪಣಾಧಿಕಾರಿ ಮುದುಕಪ್ಪಮಾತನಾಡಿ, "ಹೆಣ್ಣು ಮಕ್ಕಳ ಶಿಕ್ಷಣ, ಸುರಕ್ಷತೆ ಹಾಗೂ ಸಮಾನ ಅವಕಾಶಗಳನ್ನು ಕಲ್ಪಿಸುವಲ್ಲಿ ಕುಟುಂಬ ಮತ್ತು ಸಮಾಜದ ಪಾತ್ರ ಅತ್ಯಂತ ಮಹತ್ವದ್ದಾಗಿದೆ,” ಎಂದರು.ಮಕ್ಕಳ ಪೌಷ್ಟಿಕ ಆಹಾರದ ಪ್ರಾತ್ಯಕ್ಷಿಕೆ, ರಕ್ತಹೀನತೆ ತಡೆಗಟ್ಟುವ ಕ್ರಮಗಳು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ರಕ್ಷಣೆ, ಬಾಲ್ಯ ವಿವಾಹ ನಿಷೇಧಕುರಿತು ಜಾಗೃತಿ ಮೂಡಿಸಲಾಯಿತು.ಅಂಗನವಾಡಿ ಹಿರಿಯ ಮೇಲ್ವಿಚಾರಕಿ ಹನುಮಕ್ಕ , ಪಿಒಡಿ ಮೊಹಮ್ಮದ್ ರಫೀಕ್, ಮಹಿಳಾ ಮೇಲ್ವಿಚಾರಕಿ ಶೋಭಾ, ಜಿಲ್ಲಾ ಮಿಷನ್ ಶಕ್ತಿ ಸಂಯೋಜಕಿ ವಿದ್ಯಾ, ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಶೋಭಾ, ಅನ್ನಪೂರ್ಣ, ಶಿವರಾಜ್,ಅಂಗನವಾಡಿ ಫೆಡರೇಷನ್ ಅದ್ಯಕ್ಷೆ ಜಯಲಕ್ಷ್ಮಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು,ಸಹಾಯಕಿಯರು ಇದ್ದರು.